ದಾವಣಗೆರೆಯಲ್ಲಿ ಚಿತ್ರಮಂದಿರದ ಗಾಜುಗಳು ಪುಡಿ-ಪುಡಿ; ಕಾರಣ RRR ಸಿನಿಮಾ ಪ್ರದರ್ಶನ ರದ್ದು!

Published on
ದಾವಣಗೆರೆ: ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ ಸಿನಿಮಾ 'ಆರ್​ಆರ್​ಆರ್' ನಮ್ಮ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ದಾವಣೆಗೆರೆಯ ಜಗಳೂರಿನಲ್ಲಿ ಸಿನಿಮಾ ಪ್ರದರ್ಶನ ರದ್ದುಗೊಳಿಸಿದ್ದರಿಂದ ಪ್ರೇಕ್ಷಕರು ರೊಚ್ಚಿಗೆದ್ದಿದ್ದಾರೆ. ಹೌದು, ದಾವಣಗೆರೆ ಜಿಲ್ಲೆ ಜಗಳೂರಿನ ಭಾರತ್ ಚಿತ್ರಮಂದಿರದಲ್ಲಿ ಬೆಳಿಗ್ಗೆಯಿಂದ ಎರಡು ಶೋ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ಆದರೆ, ಮೂರನೇ ಶೋ ಸಮಯದಲ್ಲಿ ತಾಂತ್ರಿಕ ಸಮಸ್ಯೆಯಿಂದ ವಿಡಿಯೋ ಕಟ್ ಕಟ್ ಆಗುವುದಲ್ಲದೇ ಸೌಂಡ್ ಎಫೆಕ್ಟ್ ಬಾರದಿರುವುದಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದರು. ಚಿತ್ರಮಂದಿರದವರ ವಿರುದ್ಧ ಕೋಪಗೊಂಡು ಪಿಓಪಿ ಶೀಟ್, ಗಾಜಿನ ವಸ್ತುಗಳನ್ನು ಒಡೆದು ಹಾಕಿದ್ದಾರೆ.
ಇನ್ನು, ಚಿತ್ರಮಂದಿರದಲ್ಲಿರುವ ಸೀಟುಗಳನ್ನು ಮುರಿದು, ಕಿತ್ತು ಹಾಕಿ ಅವರ ಆಕ್ರೋಶವನ್ನು ಹೊರಹಾಕಿದ್ದಾರೆ. ನಂತರ, ಚಿತ್ರಮಂದಿರದವರು ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿ ಶೋ ರದ್ದುಮಾಡಿ ಹಾಗೂ ಟಿಕೆಟ್ ದರವನ್ನು ಸಹ ವಾಪಸ್ ನೀಡಿ ಪ್ರೇಕ್ಷಕರನ್ನು ಕಳುಹಿಸಿದ್ದಾರೆ. ಅದರೆ, ಈ ಬಳಿಕ ಕೂಡಾ ಜನರ ಆಕ್ರೋಶ ಕಡಿಮೆ ಆಗಿಲ್ಲ. ಯಾಕೆಂದರೆ, ಜಗಳೂರಿ ತಾಲೂಕಿನ ವಿವಿಧೆಡೆಗಳಿಂದ ಸಿನಿಪ್ರೇಕ್ಷಕರು ಸುಮಾರು 20 ರಿಂದ 30 ಕಿಲೋಮೀಟರ್ ಗ್ರಾಮೀಣ ಭಾಗದಿಂದ ಭಾರತ್ ಥಿಯೇಟರ್​ಗೆ ಆಗಮಿಸಿದ ಅಭಿಮಾನಿಗಳು ನಿರಾಸೆಯಿಂದ ಮನೆಗೆ ತೆರಳಿದರು. ಚಿತ್ರಮಂದಿರದ ತಾಂತ್ರಿಕ ದೋಷಕ್ಕೆ ಕೆಂಡಮಂಡಲವಾದ ಸಿನಿರಸಿಕರು ಆ ಚಿತ್ರಮಂದಿರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಅಂದಹಾಗೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 'ಆರ್​ಆರ್​ಆರ್' ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾವನ್ನು ನೋಡಲು ಪ್ರೇಕ್ಷಕರು ಕಾದು ಕುಳಿತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೆಚ್ಚು ಕಡಿಮೆ ಐದು ವರ್ಷಗಳ ಬಳಿಕ ಎಸ್.ಎಸ್ ರಾಜಮೌಳಿ ಅವರ ಸಿನಿಮಾ ರಿಲೀಸ್ ಆದ ಕಾರಣ ಅವರ ಅಭಿಮಾನಿಗಳು ಎಲ್ಲೆಡೆ ದೊಡ್ಡ ದೊಡ್ಡ ಕಟೌಟ್​ಗಳು ಹಾಕಿ, ಹಾಲಿನ ಅಭಿಷೇಕ ಸೇರಿದಂತೆ ಥಿಯೇಟರ್ ಗಳ ಮುಂದೆ ಮಾ. 25 ರಿಂದ ಕುಣಿದು ಕುಪ್ಪಳಿಸಿದ್ದಾರೆ. ಈಗಾಗಲೇ, ಟಿಕೆಟ್ ಸಿಗುತ್ತಿಲ್ಲ ಎಂದು ಹಲವು ಕಡೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಆದರೆ, ಟಿಕೆಟ್ ಸಿಕ್ಕರು ಕೆಲವು ಕಡೆ ತಾಂತ್ರಿಕ ದೋಷದಿಂದ ಪ್ರೇಕ್ಷಕರು ಸಿನಿಮಾ ನೋಡಲು ಸಾಧ್ಯವಾಗದೆ ಇರುವುದು ಜನರನ್ನು ಹೆಚ್ಚು ಕೋಪಗೊಳ್ಳುವಂತೆ ಮಾಡುತ್ತಿದೆ. 
ಇನ್ನು, ನಿನ್ನೆ ಅಂತು ಸಿನಿಮಾ ಟಿಕೆಟ್ ಸಿಗದ ಕಾರಣ ಹಲವು ಜೂ.ಎನ್​ಟಿಆರ್, ರಾಮ್ ಚರಣ್ ತೇಜ್ ಅಭಿಮಾನಿಗಳು ರಾಯಚೂರಿನ ಪೂರ್ಣಿಮಾ ಚಿತ್ರಮಂದಿದ ಬಾಗಿಲು, ಕಿಟಕಿ, ಪೈಪ್‌ ಮುರಿದು ಒಳನುಗ್ಗಿರುವ ದೃಶ್ಯಗಳು ವೈರಲ್ ಆಗಿದ್ದವು. ಕೇವಲ ಕರುನಾಡಲ್ಲಿ ಮಾತ್ರವಲ್ಲದೇ, ಆಂಧ್ರ-ತೆಲಂಗಾಣದ ಹಲವು ಭಾಗಗಳಲ್ಲಿಯೂ ಈ ರೀತಿಯ ಘಟನೆಗಳು ನಡೆದಿವೆ. ಆಂಧ್ರದ ಹಲವು ಪಟ್ಟಣಗಳಲ್ಲಿ ರಾತ್ರಿ ಶೋ ಹಾಕಲು ತಡವಾಗಿದ್ದರಿಂದ ಕಾಂಪೌಂಡ್ ಹಾರಿ ಚಿತ್ರಮಂದಿರದ ಬಾಗಿಲು ಮುರಿದು ಪ್ರೇಕ್ಷಕರು ಚಿತ್ರಮಂದಿದ ಒಳನುಗ್ಗಿದ್ದಾರೆ. ತೆಲಂಗಾಣದಲ್ಲಿ ಸಹ ಹಲವು ಕಡೆ ಶೋ ತಡ ಮಾಡಿದ್ದಕ್ಕೆ, ಚಿತ್ರಮಂದಿರಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ ಎನ್​ಟಿಆರ್, ರಾಮ್ ಚರಣ್ ಅಭಿಮಾನಿಗಳು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net