ಸ್ಟಾರ್ ಮಕ್ಕಳಿಗೆ ಆ ನಿಯಮ ಇದೆಯಾ ಎಂದು ಪ್ರಶ್ನಿಸಿದ ಮಲ್ಲಿಕಾ

Mallika Sherawat - Final
Published on

ಮುಂಬೈ: ಬಹಳ ದಿನಗಳಿಂದ ಮಲ್ಲಿಕಾ ಶೆರಾವತ್​ ಸುದ್ದಿಯೇ ಇರಲಿಲ್ಲ. ಇದೀಗ ಅವರು ಆರ್​ಕೆ ಎಂಬ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಲ್ಲಿಕಾ, ಗುಲಾಬೋ ಎನ್ನುವ ಪಾತ್ರವನ್ನು ಮಾಡುತ್ತಿದ್ದು, ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ.

ಈ ಚಿತ್ರಕ್ಕೆ ಮಲ್ಲಿಕಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡುವ ಮುನ್ನ ನಿರ್ದೇಶಕ ರಜತ್​ ಕಪೂರ್​ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದರಂತೆ. ಅದೇನೆಂದರೆ, ಮೊದಲಿಗೆ ಮಲ್ಲಿಕಾ ಆಡಿಷನ್​ನಲ್ಲಿ ಭಾಗವಹಿಸಬೇಕು. ಸ್ಕ್ರೀನ್​ಟೆಸ್ಟ್​ನಲ್ಲಿ ಇಷ್ಟವಾದರೆ ಮಾತ್ರ ಆಕೆಗೆ ಅವಕಾಶ ಕೊಡುವುದಾಗಿ ನಿರ್ದೇಶಕರು ಮೊದಲೇ ಹೇಳಿದ್ದರಂತೆ.

ಹಾಗೆ ನೋಡಿದರೆ, ತಾನು ಇದುವರೆಗೂ ನಟಿಸಿದ ಎಲ್ಲ ಚಿತ್ರಗಳಲ್ಲೂ ಆಡಿಷನ್​ನಲ್ಲಿ ಭಾಗವಹಿಸಿದ್ದಾಗಿ ಮಲ್ಲಿಕಾ ಹೇಳಿಕೊಂಡಿದ್ದಾರೆ. ನಾನು ಇದುವರೆಗೂ ಯಾವ ಚಿತ್ರದಲ್ಲಿ ಆಡಿಷನ್​ನಲ್ಲಿ ಭಾಗವಹಿಸದೆ ಚಿತ್ರಕ್ಕೆ ಆಯ್ಕೆ ಆಗಿಯೇ ಇಲ್ಲ. ಈ ಪ್ರಕ್ರಿಯೆ ಹೊಸದೇನಲ್ಲ. ಸ್ಟಾರ್ ಮಕ್ಕಳ ವಿಷಯದಲ್ಲಿ ಹೇಗೋ ಏನೋ ಗೊತ್ತಿಲ್ಲ. ಆದರೆ, ನಾನಂತೂ ಆಡಿಷನ್​ನಲ್ಲಿ ಭಾಗವಹಿಸಿ ಗೆದ್ದ ನಂತರವಷ್ಟೇ ಎಲ್ಲ ಚಿತ್ರಗಳಲ್ಲೂ ಆಯ್ಕೆ ಆಗಿದ್ದೇನೆ ಎಂದು ಮಲ್ಲಿಕಾ ಹೇಳಿಕೊಂಡಿದ್ದಾರೆ.

ಬರೀ ಬಾಲಿವುಡ್​ನಲ್ಲಷ್ಟೇ ಅಲ್ಲ, ಹಾಲಿವುಡ್​ನ ದಿ ಮಿಥ್​ ಚಿತ್ರದಲ್ಲಿ ಮಲ್ಲಿಕಾ ನಟಿಸಿರುವುದು ನೆನಪಿರಬಹುದು. ಆ ಚಿತ್ರದಲ್ಲೂ ಮಲ್ಲಿಕಾಗೆ ಜಾಕಿ ಚಾನ್​ ಆಡಿಷನ್​ ಮಾಡಿ, ಆಯ್ಕೆ ಮಾಡಿದರಂತೆ. ಜಾಕಿ ಚಾನ್​ ಅವರು ನನಗಿಂತ ಮೊದಲು ಹಲವು ಹುಡುಗಿಯರನ್ನು ಆಡಿಷನ್​ ಮಾಡಿದ್ದರು. ಯಾರೂ ಸರಿ ಬರಲಿಲ್ಲ. ಅಂತಿಮವಾಗಿ ನಾನು ಆಯ್ಕೆಯಾದೆ ಎಂದು ಮಲ್ಲಿಕಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net