

ಮುಂಬೈಃ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳೆಂದರೆ ಮೊದಲ ದಿನ ಮತ್ತು ಮೊದಲ ವಾರದ ಕಲೆಕ್ಷನ್ ಎಷ್ಟಿರುತ್ತದೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇರುತ್ತದೆ. ಏಕೆಂದರೆ, ಕಲೆಕ್ಷನ್ ನೂರಾರು ಕೋಟಿ ದಾಟಿರುತ್ತದೆ ಮತ್ತು ಪ್ರತಿ ಚಿತ್ರವೂ, ಹಿಂದಿನ ಚಿತ್ರದ ದಾಖಲೆಯನ್ನು ಮುರಿಯುತ್ತಿರುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಅವರ ರಾಧೇ, ಎಲ್ಲ ಹಳೆಯ ದಾಖಲೆಗಳನ್ನು ನುಡಿದಿದ್ದರು.
`ರಾಧೇ' ಚಿತ್ರದ ಕಲೆಕ್ಷನ್ ತಮ್ಮ ಕೆರಿಯರ್ನಲ್ಲೇ ಅತ್ಯಂತ ಕಡಿಮೆಯಾಗಿರಲಿದೆ ಎಂದು ಸಲ್ಮಾನ್ ಚಿತ್ರದ ಬಿಡುಗಡೆಗೂ ಮುನ್ನವೇ ಹೇಳಿಕೊಂಡಿದ್ದರು. ಅದರಂತೆ, `ರಾಧೆ'ಯ ಮೊದಲ ವಾರದ ಕಲೆಕ್ಷನ್ ಕೇವಲ ೫೯,೯೨೦ ರೂ.ಗಳಷ್ಟಾಗಿದೆ.
ಸಲ್ಮಾನ್ ಚಿತ್ರವೊಂದು ಇಷ್ಟೊಂದು ಕಡಿಮೆ ಕಲೆಕ್ಷನ್ ಮಾಡುವುದಕ್ಕೂ ಕಾರಣವಿದೆ. ಪ್ರಮುಖವಾಗಿ ಚಿತ್ರವು ತ್ರಿಪುರಾ ಹೊರತುಪಡಿಸಿ ಇನ್ನ್ಯಾವ ರಾಜ್ಯಗಳಲ್ಲೂ ಬಿಡುಗಡೆಯಾಗಿಲ್ಲ. ಕಾರಣ ಲಾಕ್ಡೌನ್. ತ್ರಿಪುರಾದಲ್ಲಿ ನೈಟ್ ಕರ್ಫ್ಯೂ ಮಾತ್ರ ಇರುವುದರಿಂದ, ಅಲ್ಲಿನ ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಬಿಡುಗಡೆ ಮಾಡಲಾಗಿತ್ತು. ಅಗರ್ತಲಾದಲ್ಲಿ ಎರಡು ಮತ್ತು ಧರ್ಮನಗರದಲ್ಲಿ ಒಂದು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಈ ಮೂರೂ ಚಿತ್ರಮಂದಿರಗಳಿಂದ ಮೊದಲ ವಾರ 60 ಸಾವಿರ ಕಲೆಕ್ಷನ್ ಆಗಿದೆ.
ಇದಲ್ಲದೆ ಚಿತ್ರವು ಗಲ್ಫ್, ಅಮೇರಿಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಂದ ಎರಡು ಮಿಲಿಯನ್ ಡಾಲರ್ ಸಂಗ್ರಹವಾಗಿದೆ ಎಂದು ಹೇಳಲಾಗಿದೆ. ಸಲ್ಮಾನ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ರಾಧೇ ಚಿತ್ರದ ಬಾಕ್ಸ್ಆಫೀಸ್ ಕಲೆಕ್ಷನ್ ಬಹಳ ಕಳಪೆಯಾಗಿದೆ.