

ಮುಂಬೈ: ಮಳೆಯಲ್ಲಿ ನೆನೆದು ಫೋಟೋಶೂಟ್ ಮಾಡಿಸಿಕೊಂಡ ನಟಿ ದೀಪಿಕಾ ಸಿಂಗ್ ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ಇದೀಗ ಭಾರಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಿರುತೆರೆಯ ಜನಪ್ರಿಯ ನಟಿಯಾಗಿರುವ ದೀಪಿಕಾ ಹಿಂದಿ ಗೀತೆಯೊಂದಕ್ಕೆ ಪೋಸ್ ಕೊಡುತ್ತಾ ವಿಡಿಯೋ ಮಾಡಿಸಿಕೊಂಡಿದ್ದಾರೆ. ಇದನ್ನು ಶೇರ್ ಮಾಡಿಕೊಂಡು ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಬೇಕು ಎಂಬ ಶೀರ್ಷಿಕೆ ನೀಡಿದ್ದಾರೆ.
ಅಷ್ಟಕ್ಕೂ ಈ ನಟಿಯ ವಿರುದ್ಧ ಇಷ್ಟೇಕೆ ಎಲ್ಲರಿಗೂ ಸಿಟ್ಟು ಎಂದರೆ ಈಕೆ ಫೋಟೋಶೂಟ್ ಮಾಡಿಸಿಕೊಂಡಿರುವುದು ತೌಕ್ತೆ ಚಂಡಮಾರುತದಿಂದಾಗಿ ಬಂದಿರುವ ಮಳೆಯಲ್ಲಿ. ಈ ಚಂಡಮಾರುತದಿಂದ ಜನರ ಜೀವನವೆ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಈ ರೀತಿ ಖುಷಿಯಿಂದ ಫೋಟೋಶೂಟ್ ಮಾಡಿಸಿಕೊಂಡಿರುವುದು ಅತ್ಯಂತ ವಿಷಾದಕರ ಎನ್ನುವುದು ನೆಟ್ಟಿಗರ ಆಕ್ರೋಶ.
ದೀಪಿಕಾ ಅವರ ಮನೆ ಮುಂದೆ ಮಳೆ ಹಾಗೂ ಗಾಳಿಯಿಂದಾಗಿ ಮರವೊಂದು ನೆಲಕ್ಕೆ ಉರುಳಿದೆ. ನೆಲಕ್ಕೆ ಉರುಳಿರುವ ಮರದಿಂದ ಯಾರಿಗೂ ಅಪಾಯ ಆಗಿಲ್ಲ ಎಂದಿರುವ ನಟಿ, ಅದರ ಮೇಲೆ ಕುಳಿತು ತಾನು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ ಎಂದಿದ್ದಾರೆ. ಜತೆಗೆ ಚಂಡಮಾರುತ ನಿಲ್ಲಲಿ ಎಂದು ಕಾಯುವ ಬದಲು ಇರುವ ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಿ ಎಂದಿದ್ದಾರೆ.
ಚಂಡಮಾರುದಿಂದ ಸಹಸ್ರಾರು ಜನರ ಜೀವನ ಅಲ್ಲೋಲ ಕಲ್ಲೋಲವಾಗಿರುವಾಗ ಇದೆಲ್ಲಾ ಏತಕ್ಕೆ, ಈ ರೀತಿಯ ಖುಷಿ ಯಾಕಾಗಿ? ಜನರ ಜೀವನದ ಕಷ್ಟದ ಸಂದರ್ಭದಲ್ಲಿ ಖುಷಿ ಅನುಭವಿಸುವುದು ಏಕೆ ಎಂದೆಲ್ಲಾ ದೀಪಿಕಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದೇನೇ ಇದ್ದರೂ ಈಕೆ ಮಾಡಿರುವ ವಿಡಿಯೋ ಮಾತ್ರ ಸಕತ್ ವೈರಲ್ ಆಗುತ್ತಿದೆ. ಕಮೆಂಟ್‌ಗಳ ಬಗ್ಗೆ ದೀಪಿಕಾ ತಲೆ ಕೆಡಿಸಿಕೊಂಡಂತೆಯೂ ಇಲ್ಲ.