ಸೆಕ್ಸ್ ಸಿಡಿ ಬಹಿರಂಗವಾಗುತ್ತಿದ್ದಂತೆ ಇಕ್ಕಟ್ಟಿನಲ್ಲಿ 'ಕಮಲ', ಮೇಲಾಟಕ್ಕೆ ಮುಂದಾದ 'ಕೈ'; ಉಭಯಪಕ್ಷಗಳಲ್ಲಿ ಭಾರಿ ರಾಜಕೀಯ ಸಂಚಲನ

Jarakiholi
Published on

ಬೆಂಗಳೂರು: ಸಚಿವ ರಮೇಶ್​ ಜಾರಕಿಹೊಳಿ ಭಾಗಿ ಆಗಿದ್ದಾರೆನ್ನಲಾದ ಸೆಕ್ಸ್​ ಸಿಡಿಯೊಂದು ಬಹಿರಂಗವಾದ ಬೆನ್ನಿಗೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಗೋಚರಿಸಲಾರಂಭಿಸಿದೆ. ಅಶ್ಲೀಲ ದೃಶ್ಯಗಳಿರುವ ವಿಡಿಯೋ ತುಣುಕು ವೈರಲ್ ಆಗುತ್ತಿರುವಂತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಕಾನೂನು ಹಾಗೂ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರ ಜತೆ ಸಭೆ ನಡೆಸುತ್ತಿದ್ದಾರೆ. ಬಜೆಟ್ ಮೀಟಿಂಗ್ ಮುಗಿಸಿ ಕಾವೇರಿಗೆ ಒಂದೇ ಕಾರಿನಲ್ಲಿ ತೆರಳಿದ ಬಿಎಸ್​ವೈ ಹಾಗೂ ಬೊಮ್ಮಾಯಿ ಅವರು ಜಾರಕಿಹೊಳಿ ಪ್ರಕರಣ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ.

ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ: ನಾಳೆಯೇ ಸಚಿವ ಸಂಪುಟ ಸಭೆ ಇದ್ದು, ಇಂದು ಈ ಸಿಡಿ ಬಿಡುಗಡೆ ಆಗಿರುವುದು ಆಡಳಿತಾರೂಢ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಕ್ಷಣಕ್ಕೆ ಏನು ಮಾಡಬೇಕು, ಏನು ಉತ್ತರ ನೀಡಬೇಕು ಎನ್ನುವ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿದ್ದು, ಪ್ರಕರಣ ಸಂಬಂಧ ಬಹಿರಂಗ ಹೇಳಿಕೆ ನೀಡಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ನಾಳೆ ಸಂಪುಟ ಸಭೆ ನಂತರ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಸದ್ಯಕ್ಕೆ ಏನ್ನನ್ನೂ ಸಮರ್ಥಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಇದ್ದಾರೆ ಎನ್ನಲಾಗಿದೆ.

ರಾಜೀನಾಮೆಗೆ ಆಗ್ರಹ: ಮತ್ತೊಂದೆಡೆ ಈ ಪ್ರಕರಣವನ್ನು ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರವಾಗಿ ಯಾವ ರೀತಿ ಬಳಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್​ ನಾಯಕರು ಮುಂದಾಗಿದ್ದು, ಕೆಪಿಸಿಸಿಯಲ್ಲೂ ಭಾರಿ ಮಾತುಕತೆಗಳು ನಡೆಯಲಾರಂಭಿಸಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕುಮಾರಪಾರ್ಕ್ ನಿವಾಸಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಮಾಜಿ ಸಚಿವರಾದ ಚಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಎಂಎಲ್​​ಸಿ ನಜೀರ್ ಅಹಮದ್ ಈ ಸಂದರ್ಭದಲ್ಲಿದ್ದರು. ನಾಳೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ನಾಯಕರು ಸುದ್ದಿಗೋಷ್ಠಿ ನಡೆಸಿ, ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಆಗ್ರಹಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net