ಮಾತಿಲ್ಲದ 'ಮಹಾಗುರು'; 36 ವರ್ಷಗಳ ನಂತರ ಮತ್ತೆ ಮೂಕಿ ಸಿನಿಮಾ

Mahaguru
Published on

ಬೆಂಗಳೂರು: ಮೂಕಿ ಸಿನಿಮಾ ಎಂದರೆ ತಕ್ಷಣ ನೆನಪಾಗುವುದು 'ಪುಷ್ಪಕ ವಿಮಾನ'. ಈ ಸಿನಿಮಾ ಬಿಡುಗಡೆಯಾದ 36 ವರ್ಷಗಳ ಬಳಿಕ ಚಂದನವನದಲ್ಲಿ ಮತ್ತೆ ಮೂಕಿ ಸಿನಿಮಾ ಬರುತ್ತಿದೆ. ಮಾತಿಲ್ಲದ ಈ ಚಿತ್ರದ ಹೆಸರು, 'ಮಹಾಗುರು'.

ಫ್ಯಾಂಟಸಿ ಕಥಾಹಂದರ ಹೊಂದಿರುವ ಈ 'ಮಹಾಗುರು' ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತು. ಕಾಡಿನ‌ಮಧ್ಯೆ ಇರುವ ಗುಪ್ತನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿ ಹಾಗೂ ಅದನ್ನು ಕಾಯುತ್ತಿರುವ ಯಕ್ಷಕನ್ಯೆಯ ನಡುವೆ ನಡೆಯುವ ಕಥಾಹಂದರ ಈ ಚಿತ್ರದಲ್ಲಿದೆ.

ಮೈಸೂರು ರಮಾನಂದ್, ಮಹಿಮಾ ಗುಪ್ತಾ, ಬ್ಯಾಂಕ್ ಜನಾರ್ದನ್​ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕಸ್ತೂರಿ ಜಗನ್ನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಎ.ಸಿ. ಮಹೇಂದ್ರನ್ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದೆ.

ನಾನು ಈವರೆಗೆ 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ ಬಂದಿದ್ದೇನೆ. ಈ ಹಿಂದೆ ಸ್ಟಂಟ್ ಮಾಸ್ಟರ್ ಎಂಬ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದೆ. ಅದಾದ ಬಳಿಕೆ ಮತ್ತೆ ಈ ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡುತ್ತಿದ್ದೇನೆ. ಒಬ್ಬ ಕುಳ್ಳನಾದರೆ, ಮತ್ತೊಬ್ಬ ನಾರ್ಮಲ್ ಮನುಷ್ಯ ಎಂದು ತಮ್ಮ ಪಾತ್ರದ ಬಗ್ಗೆ ಹಿರಿಯ ನಟ ಮೈಸೂರು ರಮಾನಂದ್ ವಿವರಣೆ ನೀಡಿದರು.

ನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿಯಾಗಿ ನಾನು ಕಾಣಿಸಿಕೊಂಡಿದ್ದೇನೆ. ಅವನಿಗೆ ನಿಧಿ ಸಿಗುತ್ತೋ ಇಲ್ವೋ ಅನ್ನೋದೇ ಕಥೆ. ಮಾತುಗಳೇ ಇಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರ. ಎರಡೂ ‌ಪಾತ್ರಗಳು ತುಂಬಾ ಚೆನ್ನಾಗಿವೆ. ಇದರಲ್ಲಿ ಉತ್ತಮ ಚಿತ್ರಕಥೆ ಹಾಗೂ ದೃಶ್ಯಸಂಯೋಜನೆ ಇದೆ ಎಂದು ಅವರು ಹೇಳಿದರು.

ಒಂದು ವಿಶೇಷ ಪ್ರಯೋಗ ಅಂತ ಈ ಸಿನಿಮಾ ಪ್ಲಾನ್ ಮಾಡಿದ್ದೇವೆ. ತುಂಬಾ ವರ್ಷಗಳ ನಂತರ ಬರುತ್ತಿರುವ ಮೂಕಿ ಚಿತ್ರ. ಸೌಂಡ್ ಎಫೆಕ್ಟ್​ನಲ್ಲೇ ಕಥೆ ಹೇಳುತ್ತೇವೆ. ಈ ಚಿತ್ರವನ್ನು ಕೇರಳ‌ ಮೂಲದ ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕರು ನನಗೆ ಹಳೇ ಪರಿಚಯ. ಸಿಜಿ ವರ್ಕ್ ನಾನೇ ಮಾಡುತ್ತಿದ್ದು 6 ತಿಂಗಳ ಕಾಲ‌ ಕೆಲಸ ಮಾಡಿದ್ದೇನೆ. ನನ್ನ ನಿರ್ದೇಶನದ ಮೂರನೇ ಚಿತ್ರವಿದು ಎಂದು ನಿರ್ದೇಶಕ ಕಸ್ತೂರಿ ಜಗನ್ನಾಥ್ ಹೇಳಿದರು.

ನಾನು ಮೂಲತಃ ಮಾಡೆಲ್. ಕೆಲವು ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇದು ಮೊದಲ ಕನ್ನಡ ಚಿತ್ರವಾಗಿದ್ದು, ನಿಧಿ ಕಾಯುವ ಏಂಜಲ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಮುಂಬೈ ಮೂಲದ ನಾಯಕಿ ಮಹಿಮಾ ಗುಪ್ತ ಹೇಳಿದರು.

ಈ ಚಿತ್ರದ ಸಬ್ಜೆಕ್ಟ್ ಚೆನ್ನಾಗಿದೆ. ಚಿತ್ರಕ್ಕೆ ಶೇ.75 ಭಾಗ ಕಾಡಿನಲ್ಲೇ ಶೂಟ್ ಮಾಡಬೇಕಾಗಿದ್ದು, ಶೇ. 25 ಚಿತ್ರೀಕರಣ ಮನೆಯೊಂದರಲ್ಲಿ ನಡೆಯಲಿದೆ. ಸಕಲೇಶಪುರ ಕಾಡಿನಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ ಎಂದು ಕ್ಯಾಮರಾಮನ್ ಮಹೇಂದ್ರನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net