

ನವದೆಹಲಿ: ಹಳೆಯ ವಸ್ತುಗಳೆಂದರೆ, ಅದಕ್ಕೊಂದು ಆ್ಯಂಟಿಕ್ ವ್ಯಾಲ್ಯೂ ಇದ್ದೇ ಇರುತ್ತೆ. ಹಳೆಯದಾದಷ್ಟೂ ಅದಕ್ಕೆ ಬೆಲೆ ಹೆಚ್ಚು. ಆದರೂ, ಫಾರ್ಚೂನ್ ನಿಯತಕಾಲಿಕೆಯ 1989ರ ಅಕ್ಟೋಬರ್ಸಂಚಿಕೆ 12 ಲಕ್ಷ ರೂ.ಗೆ ಹರಾಜಾಗಿದೆ ಎಂದರೆ ಅದರಲ್ಲೇನೂ ವಿಶೇಷವಿದೆ ಎಂದೇ ಅರ್ಥ ಅಲ್ಲವೇ?
ಕೇವಲ 30 ವರ್ಷಗಳಷ್ಟು ಹಳೆಯ ಸಂಚಿಕೆ ಅಷ್ಟೊಂದು ಬೆಲೆ ನೀಡಿ ಕೊಂಡುಕೊಳ್ಳಲು ಕಾರಣ ಅದರಲ್ಲಿದ್ದ ಸಹಿ.. ಹೌದು ಆ ಸಹಿ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ನದ್ದು ಎಂಬುದು ಇನ್ನೂ ವಿಶೇಷ.
ಹಾಗಂತಾ ಇಡೀ ಸಂಚಿಕೆ ಮಾರಾಟವಾಗಿಲ್ಲ ಕೇವಲ ಮುಖಪುಟಕ್ಕಷ್ಟೇ ಆ ಬೆಲೆ ನೀಡಲಾಗಿದೆ. ಸ್ಟೀವ್ ಜಾಬ್ ನೆಕ್ಟ್ ಐಎನ್ಸಿ ಎಂಬ ಕಂಪನಿ ಹುಟ್ಟು ಹಾಕಿದ ಬಳಿಕ ಸಂದರ್ಶನ ನಡೆಸಿ ಪ್ರಕಟಿಸಲಾದ ಮುಖಪುಟವದು. ಅದರ ಮೇಲೆ To Terry ಎಂದು ಬರೆದು ಸ್ಟೀವ್ ಜಾಬ್ ಸಹಿ ಹಾಕಿದ್ದಾರೆ.
ಅಷ್ಟಕ್ಕೂ ಟೆರ್ರಿ ಯಾರು ಎಂದರೆ, ಸ್ಟೀವ್ ಜಾಬ್ನ ಲಿಮೋಸಿನ್ನ ಚಾಲಕನಾಗಿದ್ದ. ಆತನ ಕೋರಿಕೆ ಮೇರೆಗೆ ಸ್ಟೀವ್ ಜಾಬ್ ಆ ಸಂಚಿಕೆ ಮೇಲೆ ಸಹಿ ಹಾಕಿದ್ದರು. ಜತೆಗೆ ಚಾಲಕನ ಕೋರಿಕೆ ಬಗ್ಗೆ ಲಿಮೋಸಿನ್ ಕಂಪನಿಗೆ ಜಾಬ್ ದೂರು ನೀಡಿದ್ದರು ಎಂದು ಕೂಡ ವರದಿಯಾಗಿತ್ತು.
ಸದ್ಯ ಸ್ಟೀವ್ ಜಾಬ್ ಸಹಿ ಹಾಗು ಆತನ ಜೀವನದ ಬಗ್ಗೆ ಸಂಬಂಧಿಸಿದ ವಸ್ತುಗಳಿಗೆ ಎಲ್ಲಿಲ್ಲದ ಬೆಲೆ ಇದೆ. ಇತ್ತೀಚೆಗಷ್ಟೇ ಸ್ಟೀವ್ ಜಾಬ್ ಸಹಿ ಹಾಕಿದ್ದ ಫ್ಲಾಫಿ ಡಿಸ್ಕ್ 60 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಆತನ ಸಹಿ ಇರುವ ವಸ್ತುಗಳು 35-40 ಲಕ್ಷ ರೂ.ಗಳಿಗೆ ಹರಾಜಾಗುತ್ತೆ ಎಂದು ವಿಶ್ಲೇಷಕರು ಹೇಳಿದ್ದಾರೆ.