

ನವದೆಹಲಿ: ದೇಶದಲ್ಲಿ ಸದ್ಯ ಚಿನ್ನದ ಬೆಲೆ ಇನ್ನಿಲ್ಲದಂತೆ ಏರಿದೆ. ಇನ್ನಷ್ಟು ಏರಿಕೆಯಾಗುವ ಹಾದಿಯಲ್ಲಿದೆ. ಆದರೆ, ಬೇಡಿಕೆ ಮಾತ್ರ ಪಾತಾಳಕ್ಕೆ ಕುಸಿದಿದೆ.
ಬೆಲೆ ಏರಿಕೆ ಹಾಗೂ ಕೋವಿಡ್ ಕಾರಣದಿಂದಾಗಿ ಭಾರತದಲ್ಲಿ ಚಿನ್ನದ ಬೇಡಿಕೆ ಅಥವಾ ಬಳಕೆ 26 ವರ್ಷಗಳಷ್ಟು ಕನಿಷ್ಠಕ್ಕೆ ಇಳಿದಿದೆ ಎಂದು ವಿಶ್ವ ಚಿನ್ನ ಮಂಡಳಿ ಹೇಳಿಕೆ ನೀಡಿದೆ.
ಬಂಗಾರದ ಬೆಲೆ ಇನ್ನಿಲ್ಲದ ವೇಗದಲ್ಲಿ ಹೆಚ್ಚುತ್ತಿರುವುದು ಬೇಡಿಕೆಯನ್ನು ತಲೆಕೆಳಗು ಮಾಡುತ್ತಿವೆ ಎಂದು ವಿಶ್ವ ಚಿನ್ನ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೋಮಸುಂದರಂ ಹೇಳಿದ್ದಾರೆ.
ಇದನ್ನೂ ಓದಿ; ದೇಶದಲ್ಲೇ ತಯಾರಾಗಲಿವೆ 11 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್ಫೋನ್ಗಳು; ಸ್ವಾವಲಂಬಿ ಭಾರತಕ್ಕೆ ಬಂತು ಬಲ
ಜಾಗತಿಕವಾಗಿ ಚಿನ್ನದ ಬೆಲೆ ಹೆಚ್ಚುತ್ತಿರುವ ಪರಿಣಾಮ ಭಾರತದಲ್ಲಿ ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 53 ಸಾವಿರ ರೂ.ಗೆ ಏರಿಕೆಯಾಗಿದೆ. ಇಲ್ಲಿಯವರೆಗೆ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.35 ಏರಿಕೆ ಕಂಡಿದೆ. ಚಿನ್ನದ ದೇಶೀಯ ದರದಲ್ಲಿ ಶೇ.12.5 ಆಮದು ಸುಂಕ ಹಾಗೂ ಶೇ.3 ಜಿಎಸ್ಟಿ ಒಳಗೊಂಡಿರುತ್ತದೆ.
ಬೇಡಿಕೆ ಕುಸಿದಿರುವ ಕಾರಣ 2020ರ ಪ್ರಥಮಾರ್ಧದಲ್ಲಿ ದೇಶದ ಚಿನ್ನದ ಬಳಕೆ ಪ್ರಮಾಣ 1994ರ ಕನಿಷ್ಠಕ್ಕೆ ಇಳಿದಿದೆ. 26 ವರ್ಷಗಳ ಹಿಂದೆ ಚಿನ್ನದ ಬೇಡಿಕೆ 415 ಟನ್ಗಳಾಗಿತ್ತು. ಕೋವಿಡ್ ಆತಂಕ ಇನ್ನೂ ದೂರಾಗದ ಕಾರಣ ಇನ್ನಾರು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ನಿರೀಕ್ಷಿಸುವುದು ಕಷ್ಟಕರವಾಗಿ ಪರಿಣಮಿಸಿದೆ ಎಂದು ಸೋಮಸುಂದರ್ ಹೇಳುತ್ತಾರೆ.
ಈವರೆಗೆ ಚಿನ್ನದ ಬೇಡಿಕೆಯಲ್ಲಿ ಶೇ.56 ಕಡಿಮೆಯಾಗಿ 165.6 ಟನ್ಗೆ ಇಳಿದಿದೆ. ಇನ್ನು ಕರೊನಾದಿಂದಾಗಿ ವಿಧಿಸಲಾದ ಲಾಕ್ಡೌನ್ ಕಾರಣ ಈ ಬೇಡಿಕೆಯಲ್ಲಿ ಶೇ.70 ಕಡಿಮೆಯಾಗಿದೆ. ಜೂನ್ ತ್ರೈಮಾಸಿಕದಲ್ಲಿ 63.7 ಟನ್ ಮಾರಾಟವಾಗಿದೆ. ಇದು ದಶಕದಲ್ಲಿಯೇ ಅತಿ ಕಡಿಮೆ ಬೇಡಿಕೆಯಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ.
ಭಾರತ ಅತಿ ಹೆಚ್ಚು ಚಿನ್ನ ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಎರಡಣೇ ಸ್ಥಾನದಲ್ಲಿದೆ. ದೇಶದಲ್ಲಿ ಬಳಕೆ ಕಡಿಮೆಯಾಗಿರುವುದರಿಂದ ಜಾಗತಿಕ ಬೆಲೆ ಏರಿಕೆಗೆ ಕಡಿವಾಣ ಬೀಳಬಹುದು ಎಂದು ವಿಶ್ಲೇಷಿಸಲಾಗಿದೆ. ಚಿನ್ನದ ಆಮದು ಕಡಿಮೆಯಾದಷ್ಟು ಸಾವಿರಾರು ಕೋಟಿಗಟ್ಟಲೇ ವಿದೇಶಿ ವಿನಿಮಯ ಉಳಿಯುವುದರಿಂದ ದೇಶಕ್ಕೆ ಲಾಭವೇ ಆಗಲಿದೆ ಎನ್ನುವುದು ಕೂಡ ಅಷ್ಟೇ ಸತ್ಯ.