AIADMKಯ ಏಕೈಕ ಸಂಸದನ ಆಯ್ಕೆ ಅಸಿಂಧುಗೊಳಿಸಿದ ಮದ್ರಾಸ್​ ಹೈಕೋರ್ಟ್​

OPS ravindranath
Published on

ಚೆನ್ನೈ: ತಮಿಳುನಾಡಿದ ಏಕೈಕ ಎಐಎಡಿಎಂಕೆ ಸಂಸದ, ಮಾಜಿ ಸಿಎಂ ಓ. ಪನ್ನೀರಸೆಲ್ವಂ ಪುತ್ರ ರವೀಂದ್ರನಾಥ್​ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಮದ್ರಾಸ್​ ಹೈಕೋರ್ಟ್​ ಗುರುವಾರ ಆದೇಶ ಹೊರಡಿಸಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಥೇಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರವೀಂದ್ರನಾಥ್​ ತಾವು ಸಲ್ಲಿಸಿದ್ದ ನಾಮಪತ್ರದಲ್ಲಿ ಚರ ಮತ್ತು ಸ್ಥಿರಾಸ್ತಿ ಸೇರಿದಂತೆ ಕುಟುಂದವರ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಪಿ. ಮಿಲಾನಿ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಎಸ್​.ಎಸ್​. ಸುಂದರ್​ ಅವರಿದ್ದ ಏಕಸದಸ್ಯ ಪೀಠವು ಸುದೀರ್ಘವಾಗಿ ವಾದ-ಪ್ರತಿವಾದವನ್ನು ಆಲಿಸಿ ರವೀಂದ್ರನಾಥ್​ ಅವರ ಸಂಸತ್​ ಸದಸ್ಯತ್ವವನ್ನು ಅಸಿಂಧುಗೊಳಿಸಿ ಆದೇಶಿಸಿದ್ದಾರೆ. ಇದೇ ವೇಳೆ ಲೋಕಸಭೆ ಕ್ಷೇತ್ರ ತೆರವಾಗಿದೆ ಎಂದು ನ್ಯಾಯಾಧೀಶರು ಘೋಷಿಸಿದ್ದು, ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದ್ದಾರೆ.

ರವೀಂದ್ರನಾಥ್​ ಸಂಸತ್ ಸದಸ್ಯತ್ವ ಅನರ್ಹತೆ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರ ಮಿಲಾನಿ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಅಧಿಕಾರದಲ್ಲಿತ್ತು. ನಾಮಪತ್ರದಲ್ಲಿ ಸರಿಯಾದಬ ದಾಖಲೆಗಳನ್ನು ಸಲ್ಲಿಸದೆ ರವೀಂದ್ರನಾಥ್​ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದರು.

ಚುನಾವಣೆಯಲ್ಲಿ ಅಕ್ರಮ ಎಸಗುವ ಮೂಲಕ ಗೆಲುವು ಸಾಧಿಸಿದ್ದರು. ಸತ್ಯಾಂಶಗಳನ್ನು ಮುಚ್ಚಿಟ್ಟು ಚುನಾವಣೆಯನ್ನು ಎದುರಿಸಿರುವುದು ವಸ್ತುವಾಗಿ ಪರಿಣಾಮ ಬೀರಿದೆ. ಆರೋಪಗಳನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅರ್ಜಿಯ ಮೇರೆಗೆ ತೀರ್ಪು ಹೊರ ಬಂದಿದೆ ಎಂದು ಮಿಲಾನಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net