ಶ್ರೀಮುರಳಿಗೆ ತೆಲುಗು ಚಿತ್ರರಂಗಕ್ಕೆ ವೆಲ್​ಕಮ್​ ಮಾಡಿದ ಜಗಪತಿ ಬಾಬು

Madagaja - Final
Published on

ಬೆಂಗಳೂರು: ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರವು ತೆಲುಗಿಗೆ ಡಬ್​ ಆಗಿ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಆ ಚಿತ್ರದ ತೆಲುಗು ಟೀಸರ್​ ಇಂದು ಬಿಡುಗಡೆಯಾಗಿದೆ.

'ಮದಗಜ' ಚಿತ್ರದ ಟೀಸರ್​, ಶ್ರೀಮುರಳಿ ಹುಟ್ಟುಹಬ್ಬದ ಅಂಗವಾಗಿ ಡಿಸೆಂಬರ್​ 17ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹವನ್ನು ಗಮನಿಸಿದ ತೆಲುಗು ಮಂದಿ, ಚಿತ್ರವನ್ನು ತೆಲುಗಿಗೆ ಡಬ್​ ಮಾಡುವುದಕ್ಕೆ ಮುಂದಾದರು. ಆ ನಂತರ ಚಿತ್ರದ ತೆಲುಗು ಡಬ್ಬಿಂಗ್​ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿಯೊಂದು ಬಂದಿತ್ತು.

ಇದೀಗ ಚಿತ್ರದ ತೆಲುಗು ಟೀಸರ್​ ಬಿಡುಗಡೆಯಾಗಿದೆ. ಕನ್ನಡ ಚಿತ್ರದ ಟೀಸರ್​ಗೆ ಧ್ವನಿ ಕೊಟ್ಟಂತೆಯೇ, ತೆಲುಗು ಅವತರಣಿಕೆಗೂ ಮುರಳಿ ಧ್ವನಿ ನೀಡಿದ್ದಾರೆ. ಈ ಟೀಸರ್​, ಯೂಟ್ಯೂಬ್​ನ ಆದಿತ್ಯ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ತೆಲುಗಿನ ಹಿರಿಯ ನಟ ಜಗಪತಿ ಬಾಬು, ಶ್ರೀಮುರಳಿಗೆ ತೆಲುಗು ಚಿತ್ರರಂಗಕ್ಕೆ ಸುಸ್ವಾಗತ ಕೋರಿದ್ದಾರೆ. ತೆಲುಗು ಚಿತ್ರರಂಗಕ್ಕೆ ಸ್ವಾಗತ ಎಂದು ಹಾರೈಸಿದ್ದಾರೆ.

'ಮದಗಜ' ಚಿತ್ರಕ್ಕೆ ಮಹೇಶ್​ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಇದ್ದು, ಮಿಕ್ಕಂತೆ ಚಿಕ್ಕಣ್ಣ, ದೇವಯಾನಿ, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net