

ಕರೊನಾದಿಂದಾಗಿ 2020 ಯಾವಾಗ ಮುಗಿಯುತ್ತದೋ ಎಂದುಕೊಂಡರೇ ಹೆಚ್ಚು. ಇದೀಗ 2021ಕ್ಕೆ ಪದಾರ್ಪಣೆ ಮಾಡಿದ್ದೇವಾದರೂ ಕರೊನಾ ಭಯ ಇದ್ದೇ ಇದೆ. ಹೀಗಿರುವಾಗ ಆ ವರ್ಷ ಮತ್ತು ಈ ವರ್ಷದ ಬಗ್ಗೆ ನಟ ಗಣೇಶ್, ಶ್ರೀಮುರಳಿ ಮತ್ತು ನಟಿ ಶಾನ್ವಿ ಶ್ರೀವಾಸ್ತವ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.
ಈ ವರ್ಷ ನಾಲ್ಕು ಸಿನಿಮಾ ಫಿಕ್ಸ್...
ಈ ವರ್ಷ ಎಲ್ಲರ ಲೈಫ್ನಲ್ಲೂ ಎಡಿಟ್. ಎಡಿಟ್, ಡಿಲೀಟ್ ಏನು ಬೇಕಾದರೂ ಅಂದುಕೊಳ್ಳಬಹುದು. ಎಲ್ಲರಿಗೂ ಹೊಡೆತ ಬಿದ್ದಿದೆ. ಸಿನಿಮಾಗೆ ಸ್ವಲ್ಪ ಜಾಸ್ತಿಯೇ ಏಟು ಬಿದ್ದಿದೆ. ಎಲ್ಲವೂ ಓಪನ್ ಆಗಿದ್ದರೂ, ಸಿನಿಮಾ ಇನ್ನೂ ಓಪನ್ ಆಗಿಲ್ಲ. ಓಪನ್ ಆದರೂ ಶೇ. 50ರಷ್ಟು ಮಾತ್ರ ಹಾಜರಾತಿ ಇದೆ. ಈಗ ಲಸಿಕೆ ಸಿಕ್ಕಿರುವುದರಿಂದ, ಇನ್ನೊಂದು ತಿಂಗಳಲ್ಲಿ ಎಲ್ಲವೂ ಸರಿಹೋಗಬಹುದು ಎಂಬ ನಿರೀಕ್ಷೆ ಇದೆ. ಲಾಕ್ಡೌನ್ನಲ್ಲಿ ಬಹಳ ಕಲಿತೆ. 17-18 ವರ್ಷಕ್ಕೆ ದುಡಿಯೋಕೆ ಶುರು ಮಾಡಿದೆ. ಆರು ತಿಂಗಳ ರೆಸ್ಟ್ ಯಾವತ್ತೂ ಸಿಕ್ಕಿರಲಿಲ್ಲ. ಮನೆಯವರ ಜೊತೆಗೆ ಕಾಲ ಕಳೆಯುವ ಅವಕಾಶ ಸಿಕ್ಕಿತು. ನಮ್ಮ ಬಗ್ಗೆ ಯೋಚಿಸುವುದಕ್ಕೂ ಅವಕಾಶ ಸಿಕ್ಕಿತು. ಏನು ಮಾಡ್ತಿದ್ದೀನಿ, ಏನು ಮಾಡಬೇಕು ಎಂದು ಅರಿತುಕೊಳ್ಳುವುದಕ್ಕೆ ಸಾಧ್ಯವಾಯಿತು. ಈ ವರ್ಷ ಮೂರು ಸಿನಿಮಾ ಆಗೋದು ಗ್ಯಾರಂಟಿ. ‘ತ್ರಿಬಲ್ ರೈಡಿಂಗ್’, ‘ಗಾಳಿಪಟ 2’, ‘ಸಖತ್’ ಬಿಡುಗಡೆಯಾಗಲಿವೆ. ಈ ಮಧ್ಯೆ ಒಂದೆರಡು ಹೊಸ ಚಿತ್ರಗಳನ್ನು ಒಪ್ಪಿದ್ದೀನಿ. ಇಲ್ಲಿಯವರೆಗೂ ವರ್ಷಕ್ಕೆ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು.ಇನ್ನು ಮುಂದೆ ನಾಲ್ಕು ಮಾಡಬೇಕು ಎಂದು ಮನಸ್ಸು ಹೇಳುತ್ತಿದೆ. ಈಗ ಓಟಿಟಿ ಬಂದಿದೆ. ಬಿಡುಗಡೆಯಾದ ಐದು ವಾರಗಳಿಗೆಲ್ಲ ಸಿನಿಮಾಗಳು ಅಲ್ಲಿಗೆ ಬಂದುಬಿಡುತ್ತವೆ. ಹಾಗಾಗಿ 3 ತಿಂಗಳಿಗೊಂದು ಸಿನಿಮಾ ಬರಬೇಕು ಮತ್ತು ಅದರಿಂದ ಒಬ್ಬ ನಟನಾಗಿ ಬೇರೆಬೇರೆ ಪಾತ್ರಗಳನ್ನು ಮಾಡಬಹುದು.