ಆ ಒಂದು ವಾಟ್ಸ್​ಆ್ಯಪ್​ ಮೆಸೇಜ್​ಗೆ ಆತುರ ನಿರ್ಧಾರ: ಪ್ರೇಮಿಗಳಿಬ್ಬರ ದುರಂತ ಅಂತ್ಯ!

Lovers
Published on

ಹೈದರಾಬಾದ್​: ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ನಂದಿಪೇಟ್​ ವಲಯದ ಖುದವಂದಪುರ್​ನಲ್ಲಿ ನಡೆದಿದೆ.

ಖುದವಂದಪುರ್​ ಮೂಲದ ಸುಕನ್ಯಾ (21) ಮತ್ತು ಅಯಿಲಾಪುರದ ಪ್ರೇಮ್​ ಕುಮಾರ್​ (22) ಮೃತ ಪ್ರೇಮಿಗಳು. ಇಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ನಿಜಾಮಾಬಾದ್​ನ ಗಿರಿರಾಜ್​ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು.

ಕೆಲ ದಿನಗಳಿಂದ ಸುಕನ್ಯಾಗೆ ಮದುವೆಗೆ ಮಾಡಲು ಪಾಲಕರು ವರನ ಹುಡುಕಾಟದಲ್ಲಿದ್ದರು. ಈ ವಿಚಾರ ಸುಕನ್ಯಾಗೆ ತಿಳಿದು ಭಾನುವಾರ ರಾತ್ರಿ ತನ್ನ ಬಾಯ್​ಫ್ರೆಂಡ್​ ಪ್ರೇಮ್​ ಕುಮಾರ್​ಗೆ ವಾಟ್ಸ್​ಆ್ಯಪ್​​ ಮಾಡಿ ಮಾಹಿತಿ ನೀಡಿದ್ದಳು. ಅಲ್ಲದೆ, ಇಬ್ಬರು ಆದಷ್ಟು ಬೇಗ ಮದುವೆ ಆಗೋಣ ಎಂದಿದ್ದಳು. ಆದರೆ, ಕೆಲವು ವರ್ಷ ಸುಮ್ಮನಿರು ಆಮೇಲೆ ಮದುವೆಯಾಗೋಣ ಎಂದು ಪ್ರೇಮ್​ಕುಮಾರ್​ ಹೇಳಿದ್ದ.

ಇದರ ಬೆನ್ನಲ್ಲೇ ಸುಕನ್ಯಾ ತನ್ನ ಕೋಣೆಯಲ್ಲಿ ಚಾಕುವಿನಿಂದ ಹರಿದುಕೊಂಡು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಕೋಣೆಯಲ್ಲಿ ಬರುತ್ತಿದ್ದ ನರಳುವ ಶಬ್ದ ಕೇಳಿದ ಪಾಲಕರು ಓಡಿ ಹೋಗಿ ನೋಡುವಷ್ಟರಲ್ಲಿ ಸುಕನ್ಯಾ ಕೊನೆಯುಸಿರೆಳೆದಿದ್ದಳು. ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಿಳಿಯುತ್ತಲೇ ಪ್ರೇಮ್​ ಕುಮಾರ್​ ಗ್ರಾಮದ ಹೊರವಲಯದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.

ಇದೀಗ ಇಬ್ಬರು ಕುಟುಂಬದವರು ಸಹ ದೂರು ದಾಖಲಿಸಿದ್ದು, ಈ ಬಗ್ಗೆ ಮಾತನಾಡಿರುವ ಎಸ್​ಐ ಶೋಭನ್​ಬಾಬು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮಾಡಲಾಗುವುದು ಎಂದಿದ್ದಾರೆ. ಸುಕನ್ಯಾ ಪಾಲಕರಿಗೆ ಒಟ್ಟು ಮೂವರು ಹೆಣ್ಣುಮಕ್ಕಳು. ಮನೆಯಲ್ಲಿ ನಡೆದಿದ್ದ ಗಲಾಟೆ ವಿಚಾರಕ್ಕೆ ಹಿಂದೊಮ್ಮೆ ಆಕೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಳು. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ. ಪ್ರೇಮ್​ ಕುಮಾರ್​ ಮನೆಯಲ್ಲೂ ಇದೇ ಪರಿಸ್ಥಿತಿ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net