LIVE: ಚೆನ್ನೈ-ಅಂಡಮಾನ್​ ಸಬ್​ಮರೈನ್ ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಗೆ ಚಾಲನೆ ನೀಡಿದ ಪ್ರಧಾನಿ

PM MODI Aug 10
Published on

ನವದೆಹಲಿ: ಪ್ರಾದೇಶಿಕ ಆರ್ಥಿಕತೆಗೆ ಉತ್ತೇಜನ ನೀಡುವ ಮಹತ್ವದ ಯೋಜನೆಯಾಗಿರುವ ಚೆನ್ನೈ-ಅಂಡಮಾನ್ ಸಬ್​ಮರೈನ್​ ಆಪ್ಟಿಕಲ್ ಫೈಬರ್ ಕೇಬಲ್​ ಕನೆಕ್ಟಿವಿಟಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶಗಳಾಗಿವೆ. ಅಲ್ಲಿಗೆ ಸಂಪರ್ಕ ಕಲ್ಪಿಸುವುದು ದೇಶದ ಆದ್ಯ ಕರ್ತವ್ಯವಾಗಿದೆ. ನಿಗದಿತ ಅವಧಿಯಲ್ಲಿ 2,300 ಕಿ.ಮೀ. ಉದ್ದದ ಕೇಬಲ್​ ಅನ್ನು ಸಮುದ್ರದಡಿಯಲ್ಲಿ ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಆಳ ಸಮುದ್ರ ಸಮೀಕ್ಷೆ, ಕೇಬಲ್​ ಗುಣಮಟ್ಟ ಮತ್ತು ವಿಶೇಷ ನೌಕೆಗಳನ್ನು ಉಪಯೋಗಿ ಕೇಬಲ್ ಅಳವಡಿಸುವ ಕಷ್ಟಕರ ಕೆಲಸವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಹೈ ಇಂಪ್ಯಾಕ್ಟ್​ ಪ್ರಾಜೆಕ್ಟ್​ಗಳು ಅಂಡಮಾನ್ ಮತ್ತು ನಿಕೋಬಾರ್​ನ 12 ದ್ವೀಪಗಳಿಗೆ ವಿಸ್ತರಣೆಯಾಗುತ್ತವೆ. ಅಲ್ಲಿ ಬಹುದೊಡ್ಡ ಸಮಸ್ಯೆಯಾಗಿದ್ದ ಮೊಬೈಲ್ ಮತ್ತು ಇಂಟರ್​ನೆಟ್ ಸಂಪರ್ಕ ಅಡಚಣೆಯನ್ನು ಇಂದು ನಿವಾರಿಸಲಾಗಿದೆ. ಇದಕ್ಕೆ ಹೊರತಾಗಿ ರಸ್ತೆ, ವಾಯ ಮತ್ತು ಜಲ ಸಾರಿಗೆ ಮೂಲಕ ಆ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯವೂ ಶೀಘ್ರವೇ ನಡೆಯಲಿದೆ.

ಈ ಆಪ್ಟಿಕಲ್ ಫೈಬರ್ ಕೇಬಲ್ ಪ್ರಾಜೆಕ್ಟ್​ ಯೋಜನೆಯು ಬದುಕನ್ನು ಸರಳಗೊಳಿಸುವ ದೇಶದ ಬದ್ಧತೆಯ ಭಾಗವಾಗಿದೆ. ಅದು ಆನ್​ಲೈನ್ ಕ್ಲಾಸ್​ಗಳಿರಬಹುದು, ಟೂರಿಸಂ, ಬ್ಯಾಂಕಿಂಗ್​, ಶಾಪಿಂಗ್​ ಅಥವಾ ಟೆಲಿಮೆಡಿಸಿನ್​ ಇರಬಹುದು ಇವೆಲ್ಲವೂ ಇನ್ನು ಅಂಡಮಾನ್​ - ನಿಕೋಬಾರ್​ನಲ್ಲಿರುವ ಸಾವಿರಾರು ಕುಟುಂಬಗಳಿಗೆ ಸುಲಭವಾಗಿ ಸಿಗಲಿದೆ. ಅಂಡಮಾನ್​ಗೆ ಹೋಗುವ ಪ್ರವಾಸಿಗಳಿಗೂ ಈ ಸೌಲಭ್ಯ ಸಿಗಲಿದೆ. ನೆಟ್​ ಕನೆಕ್ಟಿವಿಟಿ ಸಿಗುವ ಕಾರಣ ಇನ್ನು ಅಂಡಮಾನ್ ನಿಕೋಬಾರ್ ದ್ವೀಪಗಳು ಪ್ರವಾಸಿಗರ ನಂ. 1 ಪ್ರವಾಸಿ ಸ್ಥಳವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net