ರಾಮ ಕಿಶನ್ ಕೆ.ವಿ.
ಬೆಂಗಳೂರು: ಸಿರಿಧಾನ್ಯದಿಂದ ತಯಾರಿಸಿದ ಬಿಸ್ಕತ್, ಮಿಲೆಟ್ ಮಾಲ್ಟ್, ಕುರುಕಲು ತಿಂಡಿಗಳಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಆದರೆ ಈಗ ಇದೇ ಮೊದಲ ಬಾರಿಗೆ ಸಿರಿಧಾನ್ಯದಿಂದಲೇ ಸಿದ್ಧಪಡಿಸಿರುವ ಐಸ್ಕ್ರೀಂ ಬಂದಿದೆ. ಯಲಚೇನಹಳ್ಳಿಯ ಲಿಕಿ ಫುಡ್ಸ್ ಎಂಬ ಸಂಸ್ಥೆ ಕೃಷಿ ಮೇಳದಲ್ಲಿ ಸಿರಿಧಾನ್ಯದ ಐಸ್ಕ್ರೀಂ ತಯಾರಿಸಿ ಮಾರಾಟ ಮಾಡುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾವು, ಬಟರ್ಸ್ಕಾಚ್, ವೆನಿಲ್ಲ, ಕಾಫಿ, ಚಾಕೊಲೇಟ್, ಅನಾನಸ್, ಕಿವಿ, ಸ್ಟ್ರಾಬೆರ್ರಿ, ಗಾವ (ಸೀಬೆ) ಸೇರಿ 15ಕ್ಕೂ ಅಧಿಕ ಬಗೆಯ ಸಿರಿಧಾನ್ಯದ ಐಸ್ಕ್ರೀಂ ಲಭ್ಯವಿದೆ. ಮೇಳಕ್ಕೆ ಆಗಮಿಸಿದವರು ಮಧ್ಯಾಹ್ನ ಬಿಸಿಲಿನಲ್ಲಿ ಐಸ್ಕ್ರೀಂ ಸವಿದು ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ.

ಸಿರಿಧಾನ್ಯವನ್ನು ಸಂಸ್ಕರಿಸಿ, ಅದರಲ್ಲಿರುವ ಹಾಲಿನ ಅಂಶವನ್ನು ಹೊರತೆಗೆಯಲಾಗುತ್ತದೆ. ಬಳಿಕ ನೈಸರ್ಗಿಕ ಅಂಶಗಳುಳ್ಳ ವಿವಿಧ ರುಚಿಗಳನ್ನು ಮಿಶ್ರಣ ಮಾಡಿ ಐಸ್ಕ್ರೀಂ ಸಿದ್ಧಪಡಿಸುತ್ತೇವೆ. ಯಾವುದೇ ಕೃತಕ ಬಣ್ಣ ಹಾಗೂ ರುಚಿಯನ್ನು ಬಳಕೆ ಮಾಡುವುದಿಲ್ಲ. ಶುಚಿ ಹಾಗೂ ರುಚಿಗೆ ಪ್ರಾಶಸ ಕೊಡಲಾಗುತ್ತದೆ ಎನ್ನುತ್ತಾರೆ ಲಿಕಿ ುಡ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್. ಗೌತಮ್ ರಾಯ್ಕರ್.
ಫಾಸ್ಟ್ಫುಡ್, ಬೇಕರಿ ತಿನಿಸುಗಳನ್ನು ಇಷ್ಟಪಡುವ ಮಕ್ಕಳು ಸಿರಿಧಾನ್ಯದಿಂದ ತಯಾರಿಸಿದ ತಿಂಡಿಗಳನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಬಹುಮುಖ್ಯ ಕಾರಣ, ಸಿರಿಧಾನ್ಯದ ರುಚಿ. ಆದರೆ ಐಸ್ಕ್ರೀಂ ಅನ್ನು ಎಲ್ಲ ಮಕ್ಕಳು ತಿನ್ನಲು ಮುಂದೆ ಬರುತ್ತಾರೆ. ಹೀಗಿರುವಾಗ ಸಿರಿಧಾನ್ಯದ ಪೋಷಕಾಂಶವುಳ್ಳ ಐಸ್ಕ್ರೀಂ ಅನ್ನು ನೀಡಿದರೆ ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎನ್ನುತ್ತಾರೆ ಮಲ್ಲೇಶ್ವರ ನಿವಾಸಿ ಕವಿತಾ.

ಕೃಷಿಮೇಳದ ಮೂಲಕ ಇದೇ ಮೊದಲ ಬಾರಿಗೆ ಸಿರಿಧಾನ್ಯದ ಐಸ್ಕ್ರೀಂ ಸೇವಿಸುವ ಅವಕಾಶ ಸಿಕ್ಕಿತು. ಮ್ಯಾಂಗೋ ಹಾಗೂ ಸೀಬೆಕಾಯಿ ರುಚಿಯ ಐಸ್ಕ್ರೀಂ ಸೇವಿಸಿದೆ. ರುಚಿ ಚೆನ್ನಾಗಿದೆ. ಗುಣಮಟ್ಟದ ಈ ಉತ್ಪನ್ನ ಎಲ್ಲೆಡೆ ಸಿಗುವಂತಾಗಬೇಕು.
-ರೇವತಿ, ಬೆಂಗಳೂರು
ಸಿರಿಧಾನ್ಯದ ಐಸ್ಕ್ರೀಂ ಎಂಬುದು ಗೊತ್ತಾಗುತ್ತಿದ್ದಂತೆ ರುಚಿ ನೋಡಬೇಕು ಎನ್ನಿಸಿತು. ಹೀಗಾಗಿ ಕಿವಿ ಮತ್ತು ಸ್ಟ್ರಾಬೆರ್ರಿ ರುಚಿಯ ಐಸ್ಕ್ರೀಂ ಸೇವಿಸಿದೆ. ಶುಚಿ ಮತ್ತು ರುಚಿಯಲ್ಲಿ ಗುಣಮಟ್ಟ ಹೊಂದಿದೆ.
-ರಶ್ಮಿ, ಬೆಂಗಳೂರು
