

Pregnant Women : ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಯರು ಹಲವು ಕಠಿಣ ನಿಯಮಗಳನ್ನು ಪಾಲಿಸಬೇಕು. ತಮ್ಮ ಆರೋಗ್ಯ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯಕ್ಕಾಗಿ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಗರ್ಭಿಣಿಯರಿಗೆ ಹಿರಿಯುರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಸಾಕಷ್ಟು ಮುನ್ನಚ್ಚೆರಿಕೆಗಳನ್ನು ತೆಗೆದುಕೊಳ್ಳಲು ಸೂಚನೆ ನೀಡುತ್ತಾರೆ.
ತುಂಬು ಗರ್ಭಿಣಿಗೆ ಹಿಂದು ಸಂಪ್ರದಾಯದ ಪ್ರಕಾರ ಸೀಮಂತ ಸಮಾರಂಭ ಮಾಡುತ್ತಾರೆ. ಕೆಲವರು ಬಹಳ ಅದ್ಧೂರಿಯಿಂದ ಈ ಕಾರ್ಯಕ್ರಮ ನೆರವೇರಿಸುತ್ತಾರೆ. ಈ ವೇಳೆ ಗರ್ಭಿಣಿಯರು ತಮ್ಮ ಕೈಗಳಿಗೆ ಗೋರಂಟಿ ಅಥವಾ ಮೆಹಂದಿ ಹಚ್ಚಬಾರದು ಎಂದು ಹಿರಿಯರು ಹೇಳುತ್ತಾರೆ. ಏಕೆ ಹಚ್ಚಬಾರದು ಎಂಬುದನ್ನು ನಾವೀಗ ತಿಳಿಯೋಣ.
ಮಹಿಳೆಯರು ಸ್ವಾಭಾವಿಕವಾಗಿಯೇ ಮೆಹಂದಿಯನ್ನು ಇಷ್ಟಪಡುತ್ತಾರೆ. ಆದಾಗ್ಯೂ, ಮಹಿಳೆಯರು ಗರ್ಭಾವಸ್ಥೆಯಲ್ಲಿ ಮೆಹಂದಿ ಹಚ್ಚಿಕೊಳ್ಳದಂತೆ ಸಲಹೆ ನೀಡಲಾಗುತ್ತದೆ. ವಾಸ್ತವವಾಗಿ, ಮೆಹಂದಿ ಹಿಂದು ಧರ್ಮದ 16 ಅಲಂಕಾರಗಳಲ್ಲಿ ಒಂದಾಗಿದೆ. ಮದುವೆಗಳಿಗೆ ಮಾತ್ರವಲ್ಲ, ಯಾವುದೇ ಶುಭ ಕಾರ್ಯಕ್ರಮಗಳು ಮತ್ತು ಹಬ್ಬಗಳಿಗೂ ಮೆಹಂದಿಯನ್ನು ತಪ್ಪದೇ ಹಚ್ಚಿಕೊಳ್ಳುತ್ತಾರೆ. ಮಹಿಳೆಯರಿಗೆ ಮೆಹಂದಿ ಶುಭವೆಂದು ಪರಿಗಣಿಸಲಾಗುತ್ತದೆ.
ಆದರೆ ಗರ್ಭಾವಸ್ಥೆಯಲ್ಲಿ ಮೆಹಂದಿ ಹಚ್ಚುವುದು ಹಾನಿಕಾರಕ ಎಂದು ಹೇಳಲಾಗಿದೆ. ಮೆಹಂದಿ ಸಂತೋಷ ಮತ್ತು ಪ್ರೀತಿಯನ್ನು ಸಂಕೇತಿಸುತ್ತದೆ. ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದು, ಮೆಹಂದಿ ಹಚ್ಚುವುದರಿಂದ ಶುಕ್ರ ಗ್ರಹದ ಶಕ್ತಿ ತೀವ್ರಗೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಗ್ರಹಗಳ ಪ್ರಭಾವದ ಸಮಸ್ಯೆ ಇದ್ದಾಗ ಮೆಹಂದಿ ಹಚ್ಚದಿರುವುದು ಉತ್ತಮ ಎನ್ನಲಾಗಿದೆ. ಗರ್ಭಿಣಿ ಮಹಿಳೆಯ ಜಾತಕದಲ್ಲಿ ಶುಕ್ರ ದುರ್ಬಲವಾಗಿದ್ದಾಗ, ಅಂತಹ ಸಮಯದಲ್ಲಿ ಮೆಹಂದಿ ಹಚ್ಚಬಾರದು. ಇದು ಸಕಾರಾತ್ಮಕ ಪರಿಣಾಮಗಳ ಬದಲಿಗೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ.
ಇದಲ್ಲದೆ, ಶನಿ, ರಾಹು ಅಥವಾ ಕೇತುವಿನಂತಹ ಗ್ರಹಗಳು ಜಾತಕದಲ್ಲಿ ಬಲವಾಗಿದ್ದಾಗ, ಮೆಹಂದಿ ಹಚ್ಚುವುದು ಹೆಚ್ಚು ಅಪಾಯಕಾರಿ. ವಿಶೇಷವಾಗಿ, ಆತಂಕ ಮತ್ತು ಒತ್ತಡದಂತಹ ಅನೇಕ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ಗರ್ಭಾವಸ್ಥೆಯಲ್ಲಿ ಮೆಹಂದಿ ಹಚ್ಚದಂತೆ ವಿದ್ವಾಂಸರು ಸಲಹೆ ನೀಡುತ್ತಾರೆ.
ಆದರೆ, ಆರೋಗ್ಯ ತಜ್ಞರು ಹೇಳುವುದೇ ಬೇರೆ. ಅದೇನೆಂದರೆ, ಮೇಲೆ ಹೇಳಿರುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಮೆಹಂದಿಯು ಒಂದು ನೈಸರ್ಗಿಕ ಬಣ್ಣವಾಗಿದೆ. ಇದೇನು ಹಾನಿಕಾರಕವಲ್ಲ. ಚರ್ಮದ ಹೊರ ಪದರದಲ್ಲಿ ಮಾತ್ರ ಬಣ್ಣವನ್ನು ನೀಡುತ್ತದೆ ಹೊರತು ದೇಹದ ಒಳಗೆ ಹೋಗುವುದಿಲ್ಲ. ಹಾಗಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಮಹಿಳೆಯರು ಪ್ಯಾರಾ- ಫಿನೈಲೆನಾಡಿಯಮೈನ್ (ಪಿಪಿಡಿ) ನಂತಹ ರಾಸಾಯನಿಕ ಅಂಶವಿರುವ ಮೆಹಂದಿಯನ್ನು ಬಳಸದಂತೆ ಎಚ್ಚರಿಕೆ ವಹಿಸಬೇಕು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.