

Venkatesh Prasad : ಟೀಮ್ ಇಂಡಿಯಾದ ಮಾಜಿ ಆಯ್ಕೆದಾರ ಮತ್ತು ತರಬೇತುದಾರ ವೆಂಕಟೇಶ್ ಪ್ರಸಾದ್ ತಮ್ಮ ನೆಚ್ಚಿನ ಟಾಪ್ -5 ಭಾರತೀಯ ಕ್ರಿಕೆಟಿಗರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ಈ ಪಟ್ಟಿಯಲ್ಲಿ ಆಧುನಿಕ ಕ್ರಿಕೆಟ್ ದಂತಕಥೆಗಳೆಂದು ಪರಿಗಣಿಸಲ್ಪಟ್ಟ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಎಂಎಸ್ ಧೋನಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರಿಗೆ ಸ್ಥಾನ ಸಿಕ್ಕಿಲ್ಲ.
ಪ್ರಸಾದ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಮಾನಿಗಳ ಜತೆಗಿನ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ನೆಚ್ಚಿನ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿದರು. ಪ್ರಸಾದ್ ಅವರು ತಮ್ಮ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ನೀಡಿದರು. ಇವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅಗ್ರ ಆಟಗಾರರು ಎಂದು ಹೇಳಿದ್ದಾರೆ. ಇದಾದ ಬಳಿಕ ವೆಂಕಟೇಶ್ ಪ್ರಸಾದ್ ಜಂಟಿಯಾಗಿ ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಗುಂಡಪ್ಪ ವಿಶ್ವನಾಥ್ ಅವರ ಹೆಸರುಗಳನ್ನು ಐದನೇ ಸ್ಥಾನದಲ್ಲಿ ಉಳಿಸಿಕೊಂಡಿದ್ದಾರೆ.
ಇದರ ಜೊತೆಗೆ, ಪ್ರಸಾದ್ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಆಧುನಿಕ ಯುಗದ ಶ್ರೇಷ್ಠ ಆಟಗಾರರ ಯಾರು ಎಂಬ ಅಭಿಮಾನಿಯ ಪ್ರಶ್ನೆಗೆ ವಿರಾಟ್ ಕೊಹ್ಲಿ ಮತ್ತು ಬುಮ್ರಾ ಹೆಸರನ್ನು ಪ್ರಸಾದ್ ಹೇಳಿದರು. ವಿವಿಧ ಸ್ವರೂಪಗಳಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಹೆಸರಿಸುವಂತೆ ಕೇಳಿದಾಗ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಟಿ20ಗಳಲ್ಲಿ ಹೆನ್ರಿಕ್ ಕ್ಲಾಸೆನ್ ಅವರನ್ನು ಹೆಸರಿಸಿದರು.
ವೆಂಕಟೇಶ್ ಪ್ರಸಾದ್ ಅವರು ಭಾರತ ತಂಡಕ್ಕಾಗಿ ಆಡಿದ ನಂತರ ಆಯ್ಕೆದಾರ ಮತ್ತು ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ. ಭಾರತಕ್ಕಾಗಿ 33 ಟೆಸ್ಟ್ ಮತ್ತು 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 123 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಪ್ರಸಾದ್, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತಮಗಾಗಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರಸಾದ್ ಅವರು ತಮ್ಮ ಟಾಪ್ -5 ಕ್ರಿಕೆಟಿಗರ ಪಟ್ಟಿಯಲ್ಲಿ ಆಧುನಿಕ ಕ್ರಿಕೆಟ್ ದಂತಕಥೆಗಳನ್ನು ಸೇರಿಸದೇ ಇರುವುದು ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಪ್ರಸಾದ್ ಅವರ ಅಭಿಪ್ರಾಯದ ಪ್ರಕಾರ ಪ್ರಸ್ತುತ ಯುಗದಲ್ಲಿ ಅನೇಕ ಅತ್ಯುತ್ತಮ ಆಟಗಾರರಿದ್ದರೂ ಹಿಂದಿನ ಆಟಗಾರರಿಗೆ ಆದ್ಯತೆ ನೀಡುವುದು ಬಹಳ ಮುಖ್ಯ ಎಂದು ಅವರು ಭಾವಿಸುತ್ತಾರೆ. (ಏಜೆನ್ಸೀಸ್)