

ಮಳೆಗಾಲದ ಸಮಯದ ಒಂದು ದಿನದಂದು ಕೆರೆ ಹಾಗೂ ನದಿ ಎರಡೂ ಸೇರಿಕೊಂಡು ಮಾತನಾಡುತ್ತಿದ್ದವು. ಆಗ ನದಿಯು ಕೆರೆಗೆ ಹೇಳಿತು, ‘ನನ್ನೊಂದಿಗೆ ನೀನು ಬಾ. ಸಮುದ್ರವನ್ನು ಸೇರಿಕೊಂಡು ನಾವು ದೊಡ್ಡವರಾಗಿ ಬದುಕೋಣ’ ಎಂದಿತು. ಆಗ ಕೆರೆಯು, ‘ನಾನು ಬರುವುದಿಲ್ಲ, ಸಮುದ್ರವನ್ನು ಸೇರಿದರೆ ಸಂಪೂರ್ಣವಾಗಿ ಮುಳುಗಿ ಹೋಗುತ್ತೇನೆ. ಆಗ ನನ್ನ ಅಸ್ತಿತ್ವವೇ ಇಲ್ಲದಂತಾಗುತ್ತದೆ’ ಎಂದಿತು. ನದಿಯು, ‘ನೀನು ಹಾಗೆ ಅಂದುಕೊಳ್ಳುವುದು ತಪ್ಪು. ನಾವು ಸಮುದ್ರ ಸೇರುವುದರಿಂದ ಮುಳುಗುವುದಿಲ್ಲ, ಬದಲಾಗಿ ನಾವೇ ಸಮುದ್ರವಾಗುತ್ತೇವೆ.
ಮನಸ್ಸು ಮಾಡು ಹೋಗೋಣ’ ಎಂದಿತು. ಆಗ ಕೆರೆಯು, ‘ಸಮುದ್ರವನ್ನು ಸೇರಬೇಕೆಂದರೆ ಕಲ್ಲು, ಮುಳ್ಳುಗಳನ್ನು ದಾಟಿ ಬಹಳಷ್ಟು ದೂರ ಚಲಿಸಬೇಕಾಗುತ್ತದೆ. ಇದು ನನ್ನಿಂದ ಸಾಧ್ಯವಿಲ್ಲ’ ಎಂದಿತು. ಹೀಗೆ ಒಂದಿಲ್ಲೊಂದು ಕುಂಟು ನೆಪಗಳನ್ನು ಹೇಳುತ್ತಾ ಕೆರೆಯು ಸಮುದ್ರ ಸೇರುವುದನ್ನು ನಿರಾಕರಿಸಿತು. ಆದರೆ ನದಿಯು ಸಾಕಷ್ಟು ಸಕಾರಾತ್ಮಕ ವಿಚಾರಗಳನ್ನು ವ್ಯಕ್ತಪಡಿಸಿದರೂ ಕೂಡ ಕೆರೆಯು ತನ್ನ ಮನಃಸ್ಥಿತಿಯನ್ನು ಮಾತ್ರ ಬದಲಿಸಲಿಲ್ಲ. ಎಲ್ಲಿ ಭಯವಿರುವುದೋ ಅಲ್ಲೇ ಕಾರ್ಯವಿರುತ್ತದೆ ಎಂಬುದನ್ನು ಕೆರೆಯೂ ಅರ್ಥ ಮಾಡಿಕೊಳ್ಳಲಿಲ್ಲ. ಈ ವಿಷಯವನ್ನು ಅರ್ಥ ಮಾಡಿಕೊಂಡ ನದಿಯು ಕೊನೆಗೆ, ‘ಏನಾದರೂ ಆಗಲಿ. ನನ್ನಲ್ಲಿ ಆತ್ಮವಿಶ್ವಾಸವಿದೆ. ಕಲ್ಲು, ಮುಳ್ಳು ಯಾವುದೇ ಅಡೆತಡೆಗಳು ಎದುರಾದರೂ ಕೂಡ ಅವೆಲ್ಲವುಗಳನ್ನು ಎದುರಿಸಿ ಮುನ್ನಡೆಯಬಲ್ಲೆ’ ಎಂದು ನಿರ್ಧರಿಸಿತು. ಹೀಗೆ ಚಲಿಸುತ್ತಾ ಚಲಿಸುತ್ತಾ ಕೊನೆಗೆ ಸಮುದ್ರವನ್ನು ಸೇರಿ ಖುಷಿಪಟ್ಟಿತು. ಈ ಮೂಲಕ ಜಗತ್ತಿಗೆ ಒಂದು ಸಂದೇಶವನ್ನು ಕೂಡ ಕೊಟ್ಟಿತು.
‘ನಾನು ಸಮುದ್ರ ಸೇರಿರುವುದರಿಂದ ಅದರಲ್ಲಿ ಮುಳುಗಿಲ್ಲ; ಬದಲಾಗಿ ನಾನೇ ಸಮುದ್ರವಾಗಿದ್ದೇನೆ’ ಎಂಬುದು ಈ ಸಂದೇಶ. ಅದಕ್ಕೆ ಹೇಳುವುದು ದೃಷ್ಟಿಯಂತೆ ಸೃಷ್ಟಿ ಎಂದು. ಯಾವುದೇ ಒಂದು ಸಮಸ್ಯೆಯನ್ನು ಸಕಾರಾತ್ಮಕವಾಗಿ ಅವಲೋಕಿಸುವುದರಿಂದ ನಮಗೆ ಅವು ಸಮಸ್ಯೆಗಳಾಗಲಾರದೆ, ಅವಕಾಶಗಳಾಗಿ ಮಾರ್ಪಾಡಾಗುತ್ತವೆ. ಅಂದರೆ ಎಲ್ಲ ಸಾಮರ್ಥ್ಯ ಇದ್ದರೂ ಆತ್ಮವಿಶ್ವಾಸದ ಕೊರತೆ ಒಂದಿದ್ದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ನೋಡುವ ದೃಷ್ಟಿ ಸಕಾರಾತ್ಮಕವಾಗಿದ್ದರೆ ಹೊಸದು ಸೃಷ್ಟಿಸಲ್ಪಡುತ್ತದೆ. ಮನಸ್ಸಿದರೆ ಮಾರ್ಗ ಇದ್ದೇ ಇರುತ್ತದೆ. ನದಿಯು ಸಮುದ್ರವನ್ನು ಸೇರಿ ತಾನೇ ಸಮುದ್ರವಾಯಿತು. ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯಿತು. ಯಾವುದೇ ಪ್ರಯತ್ನ ಮಾಡದ ಕೆರೆ ಮಾತ್ರ ಕೆರೆಯಾಗಿಯೇ ಉಳಿಯಿತು.
(ಲೇಖಕರು ಹವ್ಯಾಸಿ ಬರಹಗಾರರು)