

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ಕಾಯಿಲೆಗಳಲ್ಲಿ ನೆಗಡಿ, ಕೆಮ್ಮು ಮತ್ತು ಕಫ ಮುಂಚೂಣಿಯಲ್ಲಿದೆ. ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ನವ ಯುವಕ-ಯುವತಿಯರು ಇದರಿಂದ ಬಳಲುತ್ತಿದ್ದಾರೆ. ಸಾರ್ವಜನಿಕವಾಗಿ ಧೂಮಪಾನ, ವಾಹನಗಳಿಂದ ಹೊರಹೊಮ್ಮುವ ಹೊಗೆ, ರಾಸಾಯನಿಕ ಅಂಶಗಳಿರುವ ಪಟಾಕಿಗಳನ್ನು ಸಿಡಿಸುವುದು ಇತ್ಯಾದಿಗಳಿಂದಾಗಿ ಶ್ವಾಸಕೋಶಕ್ಕೆ ಹಾನಿಯಾಗಿ ಎದೆಯಲ್ಲಿ ಬಿಗಿತ, ಉಸಿರಾಟದ ಸಮಸ್ಯೆ ಕಂಡು ಬರುತ್ತಿದ್ದು, ಇದಕ್ಕೆ ಪರಿಹಾರ ಇಂತಿವೆ.
ಎದೆಯಲ್ಲಿ ಬಿಗಿತ, ಉಸಿರಾಟದ ಸಮಸ್ಯೆ ಮೇಲಿಂದ ಮೇಲೆ ಕಾಡುತ್ತಿದ್ದರೆ 2 ಟೀ ಚಮಚ ತಾಜಾ ಶುಂಠಿಯ ರಸವನ್ನು ಸಮ ಪ್ರಮಾಣದ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ತೆಗೆದುಕೊಂಡರೆ, ನಿಮ್ಮ ಉಸಿರಾಟದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಜತೆಗೆ, ನಿಮ್ಮ ವೈದ್ಯರ ಸಲಹೆಯಂತೆ ನಿಮ್ಮ ದಿನನಿತ್ಯದ ಔಷಧಿಗಳನ್ನು ತೆಗೆದುಕೊಳ್ಳಬಹುದಾಗಿದೆ.
2 ಚಮಚ ಸಾಸಿವೆ ಎಣ್ಣೆ ಅಥವಾ ಯಾವುದೇ ಇತರ ಸಸ್ಯಜನ್ಯ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಬೆಚ್ಚಗೆ ಕಾಯಿಸಿ, ಎಣ್ಣೆಯಲ್ಲಿ ಸುಮಾರು 2 ಗ್ರಾಂ ಕರ್ಪೂರವನ್ನು ಕರಗಿಸಿಬೇಕು. ಈ ಎಣ್ಣೆಯನ್ನು ಎದೆ, ಕುತ್ತಿಗೆ ಮತ್ತು ಬೆನ್ನಿನ ಎಲ್ಲಾ ಭಾಗಗಳಿಗೆ ನಿಧಾನವಾಗಿ ಅನ್ವಯಿಸಿದರೆ ಉಸಿರಾಟ ಸರಾಗವಾಗುತ್ತದೆ. (ನಿಮ್ಮ ಚರ್ಮವು ಕರ್ಪೂರಕ್ಕೆ ಅಲರ್ಜಿಯನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ).
ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುವುದು ಹಿಂದಿನಿಂದಲೂ ಅನುಸರಿಸಿಕೊಂಡ ಕ್ರಮವಾಗಿದ್ದು, ಇದು ಶ್ವಾಸಕೋಶವನ್ನು ಸಡಿಲಗೊಳಿಸಿ ಉಸಿರಾಟವನ್ನು ಉತ್ತಮವಾಗಿಸುತ್ತದೆ. ಬಿಸಿ ನೀರಿಗೆ ಕೆಲವು ಹನಿ ನೀಲಗಿರಿ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನು ಸಹ ಬಿಸಿ ನೀರಿಗೆ ಸೇರಿಸಬಹುದಾಗಿದೆ.
ಶುಂಠಿ ಪುಡಿ ಮತ್ತು ಕರಿಮೆಣಸಿನ ಒಂದು ಚಮಚವನ್ನು ಒಂದು ಕಪ್ ಕುದಿಯುವ ನೀರಿಗೆ ಸೇರಿಸಿ ನಂತರ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಬಹುದಾಗಿದೆ. ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿನ ಪುಡಿ ಸೇರಿಸಿ ಕೆಲವು ನಿಮಿಷಗಳ ಕಾಲ ಕುದಿಸಿ, ಆರಿಸಿ ಈ ಕ್ರಮವನ್ನು ಅನುಸರಿಸಬಹುದಾಗಿದೆ. ಅರ್ಧ ಚಮಚ ಎಳ್ಳು ಬೀಜದ ಪುಡಿ ಮತ್ತು ಎರಡು ಚಮಚ ನೀರನ್ನು ಮಿಶ್ರಣ ಮಾಡಿ ಮತ್ತು ದಿನಕ್ಕೆ ಎರಡು ಬಾರಿ ಸೇವಿಸಬಹುದಾಗಿದೆ.
ಎದೆಯಲ್ಲಿ ಬಿಗಿತ, ಉಸಿರಾಟದ ಸಮಸ್ಯೆ ಇರುವ ಕೆಮ್ಮನ್ನು ತೊಡೆದುಹಾಕಲು ದಿನಕ್ಕೆ ಕನಿಷ್ಠ ಎರಡು ಬಾರಿ ಟೊಮೆಟೊ ಸೂಪ್ ಕುಡಿಯಬಹುದಾಗಿದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೀಚಮಚ ಉಪ್ಪನ್ನು ಸೇರಿಸಿ ಮತ್ತು ದಿನಕ್ಕೆ ಹಲವಾರು ಬಾರಿ ಬಾಯಿ ಮುಕ್ಕಳಿಸಬಹುದಾಗಿದೆ. ಇದು ಗಂಟಲಿನ ಉರಿಯೂತವನ್ನು ಶಮನಗೊಳಿಸುತ್ತದೆ. ಹೆಚ್ಚು ಉಪ್ಪನ್ನು ಬಳಸದಂತೆ ಎಚ್ಚರಿಕೆ ವಹಿಸಿ ಏಕೆಂದರೆ ಅದು ಗಂಟಲಿನಲ್ಲಿ ಸಂವೇದನೆಯನ್ನು ಉಂಟುಮಾಡಬಹುದು. ಬಾಯಿ ಮುಕ್ಕಳಿಸಿದ ನಂತರ ನೀರನ್ನು ಉಗುಳಲು ಮರೆಯದಿರಿ. ಜತೆಗೆ ಯಾವುದೇ ಮನೆಮದ್ದನ್ನು ಪಾಲಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್)