

ಮುಂಬೈ: ಗುರು-ಶಿಷ್ಯ ಪರಂಪರೆಯು ಭಾರತದ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯ ಹೃದಯ ಮತ್ತು ಆತ್ಮವಾಗಿದೆ ಎಂದು ರಿಲಯನ್ಸ್ ಫೌಂಡೇಷನ್ನ ಅಧ್ಯಕ್ಷೆ ನೀತಾ ಅಂಬಾನಿ ಹೇಳಿದ್ದಾರೆ.
ಮುಂಬೈನಲ್ಲಿನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ನಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಹಮ್ಮಿಕೊಂಡಿರುವ 'ಪರಂಪರಾ' ವಾರ್ಷಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರು-ಶಿಷ್ಯ ಪರಂಪರೆ ನಮ್ಮ ರಾಷ್ಟ್ರದ ಶ್ರೀಮಂತ ಪರಂಪರೆಯ ಅಡಿಪಾಯ. ಇದು ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ನಮ್ಮ ಮೌಲ್ಯಗಳ ಸಾರವನ್ನು ಸಾಕಾರಗೊಳಿಸುವ ಸಂಪ್ರದಾಯ ಎಂದು ನೀತಾ ಅಂಬಾನಿ ಹೇಳಿದರು.
'ಪರಂಪರಾ: ಗುರು ಪೂರ್ಣಿಮಾ ಸ್ಪೆಷಲ್' ಮೂಲಕ ಗುರು-ಶಿಷ್ಯರ ಕಾಲಾತೀತ ಪರಂಪರೆಯನ್ನು ನಾವು ಗೌರವಿಸುತ್ತೇವೆ ಎಂದು ಸಭಿಕರನ್ನುದ್ದೇಶಿಸಿ ಮಾತನಾಡಿದ ನೀತಾ ಅಂಬಾನಿ ಹೇಳಿದರು.
ಈ ಕಾರ್ಯಕ್ರಮವನ್ನು ಇಂದು ನೀತಾ ಅಂಬಾನಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಪಂಡಿತ್ ಕಾರ್ತಿಕ್ ಕುಮಾರ್, ಶಿಷ್ಯರಾದ ರಾಕೇಶ್ ಚೌರಾಸಿಯಾ ಮತ್ತು ನೀಲಾದ್ರಿ ಕುಮಾರ್ ಉಪಸ್ಥಿತರಿದ್ದರು.
ಪ್ರತಿಯೊಬ್ಬರ ಜೀವನದಲ್ಲೂ ಪಾಲಕರೇ ಮೊದಲ ಗುರು, ಶಿಕ್ಷಕ ಹಾಗೂ ಮಾರ್ಗದರ್ಶಕರು ಎಂದ ನೀತಾ ಅಂಬಾನಿ, ಅವರ ಮಾವ ಧೀರೂಭಾಯಿ ಅಂಬಾನಿ ತಮ್ಮ ಜೀವನದ ಮೇಲೆ ಬೀರಿದ ಪ್ರಭಾವನ್ನು ಸ್ಮರಿಸಿಕೊಂಡರು. ಸುಮಾರು 2 ಸಾವಿರ ಮಂದಿ ನೆರೆದಿದ್ದ ಈ ಸಮಾರಂಭದಲ್ಲಿ ನೀತಾ ಅಂಬಾನಿ ಗುರುವಂದನೆ ಶ್ಲೋಕಗಳನ್ನು ಪಠಿಸಿದರು.
ಈ ವರ್ಷ ಎರಡು ದಿನಗಳ ವಾರಾಂತ್ಯದ ಈ ವಿಶೇಷ ಕಾರ್ಯಕ್ರಮವು ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜರು ಮತ್ತು ಅವರ ಪ್ರಸಿದ್ಧ ಶಿಷ್ಯರನ್ನು ಒಟ್ಟುಗೂಡಿಸುತ್ತಿದೆ. ಭಾರತದ ಅತ್ಯುತ್ತಮತೆಯನ್ನು ಜಗತ್ತಿಗೆ ಪ್ರದರ್ಶಿಸುವ ದೃಷ್ಟಿಕೋನದಿಂದ ನೀತಾ ಅಂಬಾನಿಯವರ ನಿರ್ದೇಶನದಂತೆ ಈ ವಿಶೇಷ ಕಾರ್ಯಕ್ರಮ ಪ್ರಸ್ತುತಿ ಪಡಿಸಲಾಗುತ್ತಿದೆ.