ತಮ್ಮನನ್ನು ಉಳಿಸಲು ಹೋದ ಅಕ್ಕ, ಅವರಿಬ್ಬರನ್ನು ರಕ್ಷಿಸಲು ಹೋದ ಅಮ್ಮ: ಕೊನೆಗೆ ಮೂವರೂ ಬದುಕಲಿಲ್ಲ!; ಆಗಿದ್ದೇನು?

Mother Children (1)
Published on

ವಿಜಯಪುರ: ಒಬ್ಬರನ್ನು ಪ್ರಾಣಾಪಾಯದಿಂದ ತಪ್ಪಿಸುವ ಪ್ರಯತ್ನ ಕೊನೆಗೆ ಒಂದೇ ಮನೆಯ ಮೂವರು ಸಾವಿಗೀಡಾಗುವಂತೆ ಮಾಡಿದೆ. ಇಂಥದ್ದೊಂದು ದುರಂತ ವಿಜಯಪುರ ಜಿಲ್ಲೆಯಲ್ಲಿ ಇಂದು ನಡೆದಿದೆ. ಪರಿಣಾಮವಾಗಿ, ಇಬ್ಬರು ಮಕ್ಕಳೊಂದಿಗೆ ತಾಯಿಯೂ ಸಾವಿಗೀಡಾಗಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಗೀತಾ (38) ಮತ್ತು ಆಕೆಯ ಪುತ್ರಿ ಶೋಭಿತಾ (12), ಪುತ್ರ ವಾಸುದೇವ (10) ಸಾವಿಗೀಡಾದವರು. ಗೀತಾ ಬಟ್ಟೆ ತೊಳೆಯಲೆಂದು ಭೀಮಾ ನದಿ ತೀರಕ್ಕೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಭೀಮಾ ನದಿಯಲ್ಲಿ ತಾಯಿ ಗೀತಾ ಬಟ್ಟೆ ತೊಳೆಯುವಾಗ ವಾಸುದೇವ ನದಿಯಲ್ಲಿ ಇಳಿದಿದ್ದು, ಬಳಿಕ ಮುಳುಗಲಾರಂಭಿಸಿದ್ದಾನೆ. ಅದನ್ನು ಕಂಡು ಅಕ್ಕ ಶೋಭಿತಾ ತಮ್ಮನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಧಾವಿಸಿದ್ದಳು. ಆದರೆ ಇಬ್ಬರಿಗೂ ಈಜು ಬರದ ಕಾರಣಕ್ಕೆ ಅವರು ಮುಳುಗಲಾರಂಭಿಸಿದ್ದರು. ಆಗ ತಾಯಿ ತನ್ನ ಮಕ್ಕಳನ್ನು ರಕ್ಷಿಸಲು ಧಾವಿಸಿದ್ದು, ಕೊನೆಗೆ ಮೂವರೂ ಮುಳುಗಿ ನೀರುಪಾಲಾದರು. ಈ ಸಂಬಂಧ ಇಂಡಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net