ಬೈಕ್​ ಅಪಘಾತದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ; ಐವರ ಸ್ಥಿತಿ ಗಂಭೀರ

Ranchi Clash
Published on

ರಾಂಚಿ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್​ಗೆ ಬೈಕ್​ ಒಂದು ಡಿಕ್ಕಿ ಹೊಡೆದ ಪರಿಣಾಮ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಆಶಿಶ್​ ಎಂಬುವವರಿಗೆ ಸೇರಿದ್ದ ಸ್ಕೂಟರ್​ಅನ್ನು ತಮ್ಮ ಸ್ಟುಡಿಯೋ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ವ್ಯಕ್ತಿಯೋರ್ವ ಅದಕ್ಕೆ ಗುದ್ದಿದ್ದು, ಅದನ್ನು ಸರಿಪಡಿಸಿಕೊಡುವಂತೆ ಆಶಿಶ್​ ಹೇಳಿದ್ದಾರೆ. ಇದಕ್ಕೊಪ್ಪದ ಬೈಕ್​ ಸವಾರ ತನ್ನ ಕುಟುಂಬ ಸದಸ್ಯರನ್ನು ಕರೆದು ಗಲಾಟೆ ಮಾಡಲು ಶುರು ಮಾಡಿದ್ದಾನೆ.

Ranchi Clash

ಮಾರಣಾಂತಿಕ ಹಲ್ಲೆ

ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಟ ಶುರುವಾಗಿದೆ. ಈ ವೇಳೆ 20ಕ್ಕೂ ಹೆಚ್ಚು ಮಂದಿ ರಾಡ್​, ಚಾಕು, ಮಚ್ಚಿನಿಂದ ಆಶಿಶ್​ ಮೇಲೆ ದಾಳಿ ಮಾಡಿದ್ದು, ಇವರನ್ನು ಬಿಡಿಸಲು ಹೋದವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೈಕ್​ ಸರಿಮಾಡಿಸಿಕೊಡುವ ವಿಚಾರವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಹಾಗೂ ವರ್ತಕರು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳು ಕೃತ್ಯ ಎಸಗಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ವರ್ತಕರು ಪ್ರತಿಭಟನೆಯನ್ನು ಕೈಬಿಟ್ಟರು.

ಆರೋಪಿಗಳ ಮುಖಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವರನ್ನು ಪತ್ತೆಹಚ್ಚಲು ತಂಡ ಒಂದನ್ನು ರಚಿಸಲಾಗಿದೆ. ಶೀಘ್ರದಲ್ಲೇ ಕೃತ್ಯ ಎಸಗಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net