

ಮುಂಬೈ: ತಮ್ಮ ಸೋದರಳಿಯ ಅಜಿತ್ ಬಿಜೆಪಿ-ಶಿವಸೇನೆ(ಏಕನಾಥ್ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸಿರುವ ಕುರಿತು ಪ್ರತಿಕ್ರಿಯಿಸಿರವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(NCP)ದ ಮುಖ್ಯಸ್ಥ ಶರದ್ ಪವಾರ್ ಶೀಘ್ರವೇ ಎಲ್ಲ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.
ನಾನು ಎರಡು ದಶಕಗಳಿಂದ ಕಟ್ಟಿ ಬೆಳಸಿರುವ ಪಕ್ಷವು ಬಿಜೆಪಿ-ಶಿವಸೇನೆ(ಏಕನಾಥ್ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸುತ್ತದೆ ಎಂದು ಹೇಳಿರುವುದರಿಂದ ತೀವ್ರ ಬೇಜಾರಾಗಿದೆ. ಈ ಸಂಬಂಧ ಪ್ರಮುಖರ ಸಭೆ ಕರೆಯಲಾಗಿದ್ದು, ಶೀಘ್ರವೇ ಎಲ್ಲವೂ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಇದು ಗೂಗ್ಲಿ ಅಲ್ಲ ದೊಡ್ಡ ಡಕಾಯಿತಿಯಾಗಿದ್ದು, NCPಯ ಕೆಲವು ಸಹೋದ್ಯೋಗಿಗಳನ್ನು ಭ್ರಷ್ಟಾಚಾರ ಆರೋಪಗಳಿಂದ ಮುಕ್ತಗೊಳಿಸಿ ಅವರನ್ನು ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ. ಅಜಿತ್ ಪವಾರ್ ಬಂಡಾಯದಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ.
ಪಕ್ಷಕ್ಕೂ ಅಜಿತ್ ಪವಾರ್ ಬಂಡಾಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಹಿಂದೆ ಇದೇ ರೀತಿ ಹಲವು ಬಾರಿ ಆಗಿತ್ತು. ಆದರೆ, ನಾವು ಪಕ್ಷವನ್ನು ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ಕಳೆದ ತಿಂಗಳು ಎನ್ಸಿಪಿ ಅಧ್ಯಕ್ಷನ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ರಾಜಕೀಯ ಹೈಡ್ರಾಮಾದಲ್ಲಿ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು. ಬಳಿಕ ನಡೆದ ಕಾರ್ಯಾಧ್ಯಕರ ನೇಮಕದಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬ ಕಾರಣಕ್ಕೆ ಶರದ್ ವಿರುದ್ಧ ಮುನಿಸಿಕೊಂಡಿದ್ದ, ಅಜಿತ್ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದಾದ ಕೆಲ ದಿನಗಳ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಬಿಜೆಪಿ-ಶಿವಸೇನೆ(ಏಕನಾಥ್ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸುವ ಮೂಲಕ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಎನ್ಸಿಪಿಯ ಕೆಲ ಬಂಡಾಯ ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದ್ದಾರೆ.