ಚಿರಂಜೀವಿ ಅಗಲಿಕೆಗೆ ‘ಚಿರು’ ಚಿತ್ರದ ನಾಯಕಿ ಕೃತಿ ಖರಬಂದ ಭಾವುಕ ನುಡಿ!

1317208785444284
Published on

ಸ್ಯಾಂಡಲ್​ವುಡ್​ನಲ್ಲಿ ಚಿರಂಜೀವಿ ಸರ್ಜಾಗೆ ನೇಮ್​ ಮತ್ತು ಫೇಮ್​ ತಂದು ಕೊಟ್ಟ ಸಿನಿಮಾ, 2010ರಲ್ಲಿ ತೆರೆಕಂಡ ಮಹೇಶ್ ಬಾಬು ನಿರ್ದೇಶನದ ‘ಚಿರು’. ಈ ಸಿನಿಮಾ ಮೂಲಕ ಸದ್ಯ ಬಹುಬೇಡಿಕೆಯಲ್ಲಿರುವ ನಟಿ ಕೃತಿ ಖರಬಂದ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದರು. ಸಿನಿಮಾ ಹಿಟ್ ಆಯಿತು. ಅಂದಿನಿಂದ ಚಿರು ಜತೆಗೆ ಕೃತಿಗೂ ಚಂದನವನದಲ್ಲಿ ಸರಣಿ ಅವಕಾಶಗಳು ಅರಸಿಬಂದವು. ಅದಾದ ಬಳಿಕ ಏನೆಲ್ಲ ನಡೆಯಿತು ಎಂಬುದು ಗೊತ್ತಿರುವ ವಿಚಾರ. ಇದೀಗ ಇದೇ ಕೃತಿ ತಮ್ಮ ಮೊದಲ ಸಹನಟನ ಸಾವಿನ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.

ಹೌದು, ಚಿರು ಸರ್ಜಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಲಿಬಿಲಿಗೊಳಗಾದ ಕೃತಿ, ಇದು ಕನಸಿರಬಹುದು ಎಂದು ಭಾವಿಸಿದ್ದರು. ಆದರೆ, ಸೋಷಿಯಲ್​ ಮೀಡಿಯಾ, ನ್ಯೂಸ್​ಗಳಲ್ಲಿ ಯಾವಾಗ ಅಸಲಿ ವಿಚಾರ ಹೊರಬಿತ್ತೋ, ತಕ್ಷಣ ಭಾವುಕವಾಗಿದ್ದಾರೆ.

‘ಸ್ಯಾಂಡಲ್​ವುಡ್​ನ ನನ್ನ ಮೊದಲ ಸಿನಿಮಾದ ಕೋ- ಸ್ಟಾರ್ ಚಿರಂಜೀವಿ ಸರ್ಜಾ ಒಬ್ಬ ಅದ್ಬುತ ಸಹನಟ. ಅತ್ಯದ್ಬುತವಾದ ವ್ಯಕ್ತಿತ್ವ ಉಳ್ಳವರು. ಕೋಮಲ ಹೃದಯ ಮತ್ತು ಮುದ್ದು ನಗುವಿನಲ್ಲೇ ಎಲ್ಲರನ್ನು ಸೆಳೆಯುವವರು. ಅವರು ಇನ್ನಿಲ್ಲ ಎಂಬುದನ್ನು ನನಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದಿದ್ದಾರೆ. ಅದಾದ ಬಳಿಕ ಮತ್ತೊಂದು ಟ್ವೀಟ್​ ಮಾಡಿ, ‘ನಾನು ಬೆಳಗ್ಗೆ ಎದ್ದ ತಕ್ಷಣ ಚಿರು ಸಾವಿನ ಸುದ್ದಿ ಕೇಳುತ್ತಿದ್ದಂತೆ, ಇದು ಕನಸಿರಬಹುದು ಅಂದುಕೊಂಡಿದ್ದೆ. ಈಗಲೂ ನನಗೆ ನಂಬಲು ಆಗುತ್ತಿಲ್ಲ. ಮೇಘನಾ, ಧ್ರುವ ಮತ್ತವರ ಕುಟುಂಬಕ್ಕೆ ಈ ಸಾವಿನ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net