ಸುಳ್ಳುಸುದ್ದಿಗಳನ್ನು ನಂಬಲೇಬೇಡಿ ಎಂದ ಕೃತಿ ಶೆಟ್ಟಿ

Krithi Shetty - Final
Published on

ಹೈದರಾಬಾದ್​: ತಮ್ಮ ಮೊದಲ ಚಿತ್ರದಲ್ಲೇ ಸಿಕ್ಕಾಪಟ್ಟೆ ಜನಪ್ರಿಯರಾದವರು ಕೃತಿ ಶೆಟ್ಟಿ. ಕೃತಿ ಅಭಿನಯದ ಮೊದಲ ತೆಲುಗು ಚಿತ್ರ ಉಪ್ಪೆನಾ ಎರಡು ತಿಂಗಳುಗಳ ಹಿಂದೆ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಆ ಚಿತ್ರದ ನಂತರ ಟಾಲಿವುಡ್​ನಲ್ಲಿ ಕೃತಿಗೆ ಬೇಡಿಕೆ ಕೂಡಾ ಹೆಚ್ಚಾಗಿದೆ.

ಈಗಂತೂ ಹೇಗಾಗಿದೆ ಎಂದರೆ, ಟಾಲಿವುಡ್​ನಲ್ಲಿ ಬಹಳಷ್ಟು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಚಿತ್ರದಲ್ಲಿ ಕೃತಿ ನಟಿಸುತ್ತಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಕೃತಿ ಇದುವರೆಗೂ ಮೂರು ಚಿತ್ರಗಳನ್ನು ಮಾತ್ರ ಒಪ್ಪಿಕೊಂಡಿದ್ದು, ಮಿಕ್ಕಂತೆ ಯಾವುದೇ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲವಂತೆ. ಆದರೆ, ಬಹಳಷ್ಟು ಚಿತ್ರಗಳಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಅವರಿಗೆ ಬೇಸರವಿದ್ದು, ಸುಮ್ಮನೆ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಕೃತಿ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಬಹಳಷ್ಟು ಚಿತ್ರಗಳಲ್ಲಿ ನನ್ನ ಹೆಸರು ಕೇಳಿಬರುತ್ತಿದೆ. ಆದರೆ, ನಾನು ಒಪ್ಪಿಕೊಂಡಿರುವುದು ಮೂರು ಚಿತ್ರಗಳನ್ನು ಮಾತ್ರ. ಮಿಕ್ಕಂತೆ ಎಲ್ಲವೂ ಸುಳ್ಳು. ಸುಮ್ಮನೆ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ. ಮೊದಲು ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿದ ಮೇಲೆ ಬೇರೆ ಚಿತ್ರಗಳ ಬಗ್ಗೆ ಗಮನಹರಿಸುತ್ತೇನೆ.ಹಾಗೇನಾದರೂ, ಹೊಸ ಚಿತ್ರವನ್ನು ಒಪ್ಪಿಕೊಂಡರೆ, ನಾನೇ ಹೇಳುತ್ತೀನಿ ಎಂದು ಕೃತಿ ಹೇಳಿದ್ದಾರೆ.

ಅಂದಹಾಗೆ, ನಾಣಿ ಅಭಿನಯದ ಶ್ಯಾಮ್​ ಸಿಂಗ ರಾಯ್​, ಸುಧೀರ್​ ಬಾಬು ಅಭಿನಯದ ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ ಮತ್ತು ರಾಮ್​ ಪೋತಿನೇನಿ ಅಭಿನಯದ ಚಿತ್ರಗಳನ್ನು ಮಾತ್ರ ಒಪ್ಪಿಕೊಂಡಿದ್ದು, ಈ ಪೈಕಿ ಮೂರನೆಯ ಚಿತ್ರದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net