ಸೆಲೆಬ್ರಿಟಿಗಳು ಕುಡಿಯೋ ಕೊಂಬುಚಾ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದರಲ್ಲಿ ಇಷ್ಟೊಂದು ಪ್ರಯೋಜನವಿದೆಯಾ? Kombucha Tea

Kombucha Tea
Published on

Kombucha Tea : ಅನೇಕರಿಗೆ ಚಹಾ ಕುಡಿಯುವ ಅಭ್ಯಾಸವಿದೆ. ಆದರೆ, ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ಮಾಮೂಲಿ ಚಹಾವನ್ನು ಬಿಟ್ಟು ಎಲ್ಲರೂ ಒಂದೊಂದು ರೀತಿಯ ಟೀಗೆ ಒಗ್ಗಿಕೊಳ್ಳುತ್ತಿದ್ದಾರೆ. ಗ್ರೀನ್ ಟೀ, ಮಸಾಲ ಟೀ, ಪುದಿನಾ ಟೀ ಹಾಗೂ ಶುಂಠಿ ಟೀ ಹೀಗೆ ಹಲವು ರೀತಿಯ ಚಹಾಗಳಿವೆ. ಇದೆಲ್ಲವನ್ನು ನೀವು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಕೊಂಬುಚಾ ಟೀ ಬಗ್ಗೆ ಎಂದಾದರೂ ಕೇಳಿದ್ದೀರಾ? ಯಾವ ದೇಶವು ಮೊದಲು ಈ ಟೀ ಅನ್ನು ತಯಾರಿಸಿತು ಎಂಬುದು ಈವರೆಗೂ ತಿಳಿದಿಲ್ಲ. ಆದರೆ, ಈಗ ಪ್ರಪಂಚದಾದ್ಯಂತದ ಅನೇಕ ಜನರು ಇದನ್ನು ಪ್ರತಿದಿನ ಕುಡಿಯುತ್ತಾರೆ. ಕೊಂಬುಚಾ ಚಹಾದ ಅದ್ಭುತ ಪ್ರಯೋಜನಗಳಿಂದಾಗಿ ಭಾರತೀಯ ಸೆಲೆಬ್ರಿಟಿಗಳು ಸಹ ಈ ಟೀಗೆ ಅಡಿಕ್ಟ್​ ಆಗಿದ್ದಾರೆ.

ಈ ಕೊಂಬುಚಾ ಚಹಾವನ್ನು ಅಸಿಟಿಕ್ ಆಸಿಡ್ ಬ್ಯಾಕ್ಟೀರಿಯಾ, ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ, ಕಪ್ಪು ಚಹಾ ಮತ್ತು ಯೀಸ್ಟ್‌ನಿಂದ ತಯಾರಿಸಲಾಗುತ್ತದೆ. ಈ ರುಚಿಕರವಾದ ಪ್ರೋಬಯಾಟಿಕ್ ಪಾನೀಯವನ್ನು ತಯಾರಿಸುವ ಪ್ರಕ್ರಿಯೆಯನ್ನು ಹುದುಗುವಿಕೆ ಎಂದೂ ಕರೆಯುತ್ತಾರೆ. ಕೊಂಬುಚಾವನ್ನು ನಿಧಾನವಾಗಿ ಹುದುಗಿಸಿದಾಗ, ಅದರ ದ್ರವದಲ್ಲಿರುವ ವಿವಿಧ ಕಿಣ್ವಗಳು ಸಕ್ಕರೆ ಮತ್ತು ಚಹಾವನ್ನು 7 ರಿಂದ 10 ದಿನಗಳ ಅವಧಿಯಲ್ಲಿ ಸ್ವಲ್ಪ ಹುಳಿ, ಕಾರ್ಬೊನೇಟೆಡ್, ರಿಫ್ರೆಶ್ ಪಾನೀಯವಾಗಿ ಪರಿವರ್ತಿಸುತ್ತವೆ.

ಕೊಂಬುಚಾವು ಅನೇಕ ಆಮ್ಲಗಳು, ಜೀವಸತ್ವಗಳು ಮತ್ತು ಕೆಲವು ಹೈಡ್ರೊಲೈಟಿಕ್ ಕಿಣ್ವಗಳನ್ನು ಹೊಂದಿರುತ್ತದೆ. ಇವು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳನ್ನು ಸಹ ಕೊಲ್ಲುತ್ತದೆ. ಮೇದೋಜ್ಜೀರಕ ಗ್ರಂಥಿ, ಯಕೃತ್ತು ಮತ್ತು ಮೂತ್ರಪಿಂಡಗಳು ಸೇರಿದಂತೆ ವಿವಿಧ ಅಂಗಗಳನ್ನು ರಕ್ಷಿಸಲು ಕೊಂಬುಚಾ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಕೊಂಬುಚಾ ರುಚಿಕರವಾದ ಪಾನೀಯ ಮಾತ್ರವಲ್ಲದೆ ಆರೋಗ್ಯಕರ ಪಾನೀಯವೂ ಆಗಿದೆ. ಸಕ್ರಿಯ ಜೀವನಶೈಲಿಯನ್ನು ನಡೆಸುವವರು ಈ ಪಾನೀಯವನ್ನು ಪ್ರತಿದಿನ ಸೇವಿಸಿದರೆ ಕೆಲವು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಬಹುದು. ಕೊಂಬುಚಾ ಜೀರ್ಣಕ್ರಿಯೆಯನ್ನು ಸಕ್ರಿಯವಾಗಿರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಹೃದ್ರೋಗ ಬರುವ ಸಾಧ್ಯತೆಯೇ ಇರುವುದಿಲ್ಲ. ಈ ಪಾನೀಯವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.

ಈ ಪಾನೀಯದಲ್ಲಿರುವ ವಿವಿಧ ಅಮೈನೋ ಆಮ್ಲಗಳು ಹೊಟ್ಟೆಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತವೆ. ಹೀಗಾಗಿ, ಮಲಬದ್ಧತೆಗೂ ಪರಿಹಾರವಿದೆ. ಲ್ಯಾಕ್ಟೋಬಾಸಿಲಸ್‌ನಂತಹ ವಿವಿಧ ಬ್ಯಾಕ್ಟೀರಿಯಾಗಳು ಹೊಟ್ಟೆಯ ಸೋಂಕು ಮತ್ತು ಉರಿಯೂತವನ್ನು ತಡೆಯುತ್ತದೆ. ಇದಲ್ಲದೆ, ಕೊಂಬುಚಾ ಚಹಾವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆ ತೋರಿಸಿದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net