

Bambay High Court : ಅಪ್ರಾಪ್ತ ಪತ್ನಿಯೊಂದಿಗಿನ ಒಪ್ಪಿತ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಕೃತ್ಯವನ್ನು ಕಾನೂನಿನಡಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದೇ ವಿಚಾರವಾಗಿ ವ್ಯಕ್ತಿಯೊಬ್ಬನಿಗೆ 10 ವರ್ಷಗಳ ಶಿಕ್ಷೆ ನೀಡಿದ್ದ ಹೈಕೋರ್ಟ್ನ ನಾಗ್ಪುರ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ.
ಲೈಂಗಿಕ ಸಂಬಂಧದ ಒಪ್ಪಿಗೆಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿದೆ. ಅದಕ್ಕಿಂತ ಕಡಿಮೆ ವಯಸ್ಸಿನವರೊಂದಿಗೆ ದೈಹಿಕ ಸಂಬಂಧ ಹೊಂದುವುದು ಅತ್ಯಾಚಾರಕ್ಕೆ ಸಮ ಎಂದು ನ್ಯಾಯಮೂರ್ತಿ ಜಿ.ಎ. ಸನಪ್ ಅವರಿದ್ದ ಏಕಸದಸ್ಯ ಪೀಠ ಹೇಳಿತು.
ಏನಿದು ಪ್ರಕರಣ?
ಸಂತ್ರಸ್ತೆ ಮಹಾರಾಷ್ಟ್ರದ ವಾರ್ಧಾದಲ್ಲಿ ವಾಸವಾಗಿದ್ದು, ಆರೋಪಿ ಆಕೆಯ ನೆರೆಯವನಾಗಿದ್ದ. ಸಂತ್ರಸ್ತೆ ತನ್ನ ತಂದೆ, ಸಹೋದರಿಯರು ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಆರೋಪಿ ಮತ್ತು ಸಂತ್ರಸ್ತೆ 2019ರಲ್ಲಿ ದೂರು ದಾಖಲಾಗುವ ಮುನ್ನ 3 ರಿಂದ 4 ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. ಈ ವೇಳೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೂ ಸಂತ್ರಸ್ತೆ ಒಪ್ಪಿರಲಿಲ್ಲ.
ಸಂತ್ರಸ್ತೆ ಮಾಡಿರುವ ಆರೋಪಗಳ ಪ್ರಕಾರ, ಆರೋಪಿಯು ಆರಂಭದಲ್ಲಿ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಕೆಲವು ನೆರೆಹೊರೆಯವರ ಸಮ್ಮುಖದಲ್ಲಿ ಬಾಡಿಗೆ ಕೋಣೆಯಲ್ಲಿ 'ನಕಲಿ ಮದುವೆ' ಕಾರ್ಯಕ್ರಮವನ್ನು ಆಯೋಜಿಸಿದ್ದ. ಮದುವೆಯಾದ ಬಳಿಕ ಆರೋಪಿ, ಸಂತ್ರಸ್ತೆಯ ಮೇಲೆ ತುಂಬಾ ದೌರ್ಜನ್ಯ ಎಸಗಿದ್ದಾನೆ. ಇದರಲ್ಲಿ ದೈಹಿಕ ಹಲ್ಲೆ ಮತ್ತು ಗರ್ಭಪಾತವೂ ಸೇರಿದೆ. ಅಲ್ಲದೆ, ಮಗುವಾದ ಬಳಿಕ ತಂದೆ ನಾನಲ್ಲ ಎಂದೂ ಸಹ ಹೇಳಿದ್ದನು. ಈ ಹಿನ್ನೆಲೆಯಲ್ಲಿ 2019ರ ಮೇ ತಿಂಗಳಲ್ಲಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ತಮ್ಮಿಬ್ಬರ ಲೈಂಗಿಕತೆಯು ಒಪ್ಪಿಗೆಯಿಂದ ಕೂಡಿತ್ತು ಮತ್ತು ಸಂತ್ರಸ್ತೆ ನನ್ನ ಹೆಂಡತಿ ಎಂದು ಪ್ರತಿವಾದದಲ್ಲಿ ಆರೋಪಿ ಹೇಳಿಕೊಂಡಿದ್ದಾನೆ. ಆದಾಗ್ಯೂ, ನ್ಯಾಯಮೂರ್ತಿ ಸನಪ್ ಅವರು, "ನನ್ನ ದೃಷ್ಟಿಯಲ್ಲಿ, ಈ ವಾದವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಈ ಪ್ರಕರಣದಲ್ಲಿ, ಅಪರಾಧದ ದಿನಾಂಕದಂದು ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂದು ಸಾಬೀತಾಗಿದೆ ಎಂದರು.
ಆರೋಪಿ ಮತ್ತು ಸಂತ್ರಸ್ತೆ ಸಂಬಂಧದಿಂದ ಜನಿಸಿದ ಮಗುವಿನ ಜೈವಿಕ ಪೋಷಕರು ಅವರೇ ಎಂಬುದನ್ನು ಡಿಎನ್ಎ ವರದಿ ದೃಢಪಡಿಸಿದೆ ಎಂದು ಇದೇ ಸಂದರ್ಭದಲ್ಲಿ ಪೀಠ ಹೇಳಿದೆ. (ಏಜೆನ್ಸೀಸ್)