ಸಿನಿಮಾ

ದರೋಡೆ ಪ್ರಕರಣದಲ್ಲಿ ಡಿಜಿಪಿಯ ಬಾಡಿಗಾರ್ಡ್​ ಸೇರಿದಂತೆ ಇಬ್ಬರು ಪೊಲೀಸರ ಬಂಧನ!

ಪಶ್ಚಿಮಬಂಗಾಳ: ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮನೋಜ್ ಮಾಳವಿಯಾ ಅವರ ಭದ್ರತೆಗೆ ನಿಯೋಜಿಸಲಾದ ಅಂಗರಕ್ಷಕ ಸೇರಿದಂತೆ ಇಬ್ಬರು ಪೊಲೀಸರನ್ನು ಕೋಲ್ಕತ್ತಾದಲ್ಲಿ ಕಳ್ಳತನ ಮತ್ತು ದರೋಡೆ ಆರೋಪದ ಮೇಲೆ ಬಂಧಿಸಲಾಗಿದೆ.

ಅಲಿಪುರದ ಗೋಪಾಲ್ ನಗರ ರಸ್ತೆಯ ಡಿಜಿಪಿ ಅಂಗರಕ್ಷಕ ಮೊಹಮ್ಮದ್ ಶಹಜಹಾನ್ (33) ಮತ್ತು ಹೌರಾ ಜಿಲ್ಲೆಯ ಬೇಲೂರು ನಿವಾಸಿ ಪ್ರವೀಣ್ ಪ್ರಸಾದ್ (35) ಬಂಧಿತರು. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 

ದರೋಡೆ ಮಾಡಲು ಇತ್ತು ಪಕ್ಕಾ ಪ್ಲಾನ್! 

ಉದ್ಯಮಿ ಸಂತೋಷ್ ಸಿಂಗ್ ಮತ್ತು ಅವರ ಸ್ನೇಹಿತ ಏಪ್ರಿಲ್ 26 ರಂದು ಸೆಂಟ್ರಲ್ ಕೋಲ್ಕತ್ತಾದ ಕಚೇರಿಗೆ ತಲುಪಿಸಲು ಭವಾನಿಪುರದಿಂದ 17 ಲಕ್ಷ ರೂಪಾಯಿ ಹಣವನ್ನು ಮೋಟಾರ್ ಸೈಕಲ್‌ನಲ್ಲಿ ಸಾಗಿಸುತ್ತಿದ್ದರು ಎಂದು ಈ ಪೊಲೀಸರಿಗೆ ಮಾಹಿತಿ ಲಭಿಸಿತ್ತು.

ಇದನ್ನೂ ಓದಿ: ಕೆನರಾ ಬ್ಯಾಂಕ್ ಮ್ಯಾನೇಜರ್ ಮನೆಯಲ್ಲಿ ದರೋಡೆ

ಸಂತೋಷ್ ಸಿಂಗ್ ಮತ್ತು ಅವರ ಸ್ನೇಹಿತ ಪಾರ್ಕ್ ಸ್ಟ್ರೀಟ್ ಮೇಲ್ಸೇತುವೆಯನ್ನು ದಾಟುತ್ತಿದ್ದಾಗ, ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಅವರನ್ನು ಅಡ್ಡಗಟ್ಟಿದರು. ನಂತರ ಷಹಜಹಾನ್ ಮತ್ತು ಪ್ರವೀಣ್ ಇಬ್ಬರ ಬಳಿಯಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಉದ್ಯಮಿಯ ದೂರಿನ ಮೇರೆಗೆ ಪಾರ್ಕ್ ಸ್ಟ್ರೀಟ್ ಪ್ರದೇಶದ ಸಿಸಿಟಿವಿ ದೃಶ್ಯಗಳು ಮತ್ತು ಇತರ ಪುರಾವೆಗಳನ್ನು ವಿಶ್ಲೇಷಿಸಿದ ನಂತರ ಕೋಲ್ಕತ್ತಾ ಪೊಲೀಸರ ದರೋಡೆ ತಡೆ ಸೆಲ್‌ ಇಬ್ಬರು ಶಂಕಿತರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಗ್ಗದ ಮನೆಯಲ್ಲಿ ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ವಸ್ತು ದರೋಡೆ; ಕದ್ದದ್ದು ಮಾತ್ರ ಸೀರೆ-ಬಟ್ಟೆಯಲ್ಲ!

ಇಬ್ಬರು ಶಂಕಿತರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು ಕದ್ದ ನಗದಿನ ಭಾಗವನ್ನು ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾನ್‌ಸ್ಟೆಬಲ್ ಪ್ರವೀಣ್ ಪ್ರಸಾದ್‌ನನ್ನು ಪೊಲೀಸರು ಮೊದಲು ಬಂಧಿಸಿದ್ದು ನಂತರ ಈತ ಕೊಟ್ಟ ಮಾಹಿತಿಯ ಆಧಾರದ ಮೇಲೆ ಕೋಲ್ಕತ್ತಾದ ಗೋಪಾಲನಗರ ಪ್ರದೇಶದ ಫ್ಲ್ಯಾಟ್‌ ಒಂದರಲ್ಲಿ ಶಹಜಹಾನ್‌ನನ್ನು ಸೆರೆ ಹಿಡಿಯಲಾಗಿದೆ ಎಂದು ಪ್ರಕರಣಕ್ಕೆ ಸಂಬಧಪಟ್ಟ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್