ಇನ್ಮುಂದೆ ಪಾಕ್​ಅನ್ನು ಪ್ರತಿನಿಧಿಸುವ ಆಸೆ ನನಗಿಲ್ಲ; ಸಾನಿಯಾ ಮಿರ್ಜಾ ಮಾಜಿ ಪತಿಯ ಹೇಳಿಕೆ ವೈರಲ್

Sania Malik
Published on

ನವದೆಹಲಿ: ಆರ್ಥಿಕ ಸಂಕಷ್ಟ, ಉಗ್ರವಾದ ಸೇರಿದಂತೆ ಒಂದಿಲ್ಲೊಂದು ಕಾರಣಕ್ಕೆ ವಿಶ್ವದ ಮುಂದೆ ಬೆತ್ತಲಾಗಿರುವ ಪಾಕಿಸ್ತಾನವು ಸದಾ ಸುದ್ದಿಯಲ್ಲಿರುತ್ತದೆ. ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತ ಟೀಕೆಗೆ ಗುರಿಯಾಗುವ ಪಾಕಿಸ್ತಾನ ದೇಶವು ಆರ್ಥಿಕ ಸಂಕಷ್ಟದ ನಡುವೆಯೂ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್​ ಟ್ರೋಪಿಗೆ ಆತಿಥ್ಯ ವಹಿಸಲಿದೆ. ಇದರ ನಡುವೆಯೇ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರ ಶೋಯೆಬ್​ ಮಲಿಕ್​ ತಾನು ತನ್ನ ರಾಷ್ಟ್ರವನ್ನು ಪ್ರತಿನಿಧಿಸುವುದರಲ್ಲಿ ಯಾವುದೇ ಆಸಕ್ತಿಯನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಭಾರತದ ಟೆನ್ನಿಸ್​ ಆಟಗಾರ್ತಿ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್​ ಮಲಿಕ್​ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಪಾಕಿಸ್ತಾನವನ್ನು ಟೀಕಿಸಿ ಕಮೆಂಟ್​ ಹಾಕುತ್ತಿದ್ದಾರೆ. ಇದಲ್ಲದೆ ಭಾರತ ಪಾಕ್​ಗೆ ಬರುವ ಕುರಿತು ಶೋಯೆಬ್​ ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಶೋಯೆಬ್​, ಪಾಕಿಸ್ತಾನ ಕ್ರಿಕೆಟ್​ ತಂಡಕ್ಕಾಗಿ ನಾನು ಇಷ್ಟು ವರ್ಷಗಳ ಕಾಲ ಆಡಿರುವುದು ನನಗೆ ಖುಷಿ ನೀಡಿದೆ. ಆದರೆ, ಇನ್ಮುಂದೆ ನನಗೆ ಪಾಕಿಸ್ತಾನದ ಪರವಾಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ನಾನು ಮುಂದಿನ ದಿನಗಳಲ್ಲಿ ಟಿ20 ಲೀಗ್​ಗಳಲ್ಲಿ ಹೆಚ್ಚು ಆಡುತ್ತೇನೆ. ಲಭ್ಯವಿರುವ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತೇನೆ. ಆದರೆ, ಇನ್ನು ಮುಂದೆ ಪಾಕಿಸ್ತಾನಕ್ಕಾಗಿ ಆಡುವ ಆಸೆ ನನಗಿಲ್ಲ ಎಂದು ಹೇಳಿದ್ದಾರೆ.

ಭಾರತ ಚಾಂಪಿಯನ್ಸ್​ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳುವ ಕುರಿತು ಪ್ರತಿಕ್ರಿಯಿಸಿದ ಶೋಯೆಬ್​, ಎರಡು ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಬೇರೆ ವಿಷಯವಾಗಿದ್ದು, ಅಗತ್ಯವಿರುವ ರೀತಿಯಲ್ಲಿ ಅದನ್ನು ಪರಿಹರಿಸಬೇಕಿದೆ. ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸಬಾರದು. ಏಕದಿನ ವಿಶ್ವಕಪ್​ ಸಮಯದಲ್ಲಿ ಪಾಕಿಸ್ತಾನ ತಂಡವು ಭಾರತಕ್ಕೆ ಹೋದ ರೀತಿ ಅವರು ಕೂಡ ಇಲ್ಲಿಗೆ ಬಂದು ಆಡಬೇಕು. ಭಾರತ ತಂಡದಲ್ಲಿರುವ ಈಗಿರುವ ಆಟಗಾರರು ಪಾಕಿಸ್ತಾನದ ನೆಲದಲ್ಲಿ ಆಡಿಲ್ಲ. ಇದು ಅವರಿಗೆ ಉತ್ತಮ ಅವಕಾಶವಾಗಿದ್ದು, ಭಾರತ ತಂಡವು ಪಾಕಿಸ್ತಾನಕ್ಕೆ ಬರಬೇಕು ಎಂದು ಶೋಯೆಬ್​ ಮಲಿಕ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net