ಉತ್ತರ ಕೊರಿಯಾ ಸರ್ವಾಧಿಕಾರಿ ಕೋಪಕ್ಕೆ ಕಾರಣವಾಯ್ತು ಪತ್ನಿಯ ಅಶ್ಲೀಲ ಚಿತ್ರಗಳು...!

Kim jong un
Published on

ಪ್ಯೊಂಗ್​ಯಾಂಗ್​​​: ಉತ್ತರ ಕೊರಿಯಾದ ಸುಪ್ರೀಂ ಲೀಡರ್​ ಕಿಮ್​ ಜಾಂಗ್​ ಉನ್ ಪತ್ನಿಯ ಅಶ್ಲೀಲ ಚಿತ್ರಗಳನ್ನೊಳಗೊಂಡ ಹಾಗೂ ಉತ್ತರ ಕೊರಿಯಾ ವಿರೋಧಿ ಕರಪತ್ರಗಳು ಹರಿದಾಡುತ್ತಿರುವುದು ಕಿಮ್​ ಜಾಂಗ್​ ಉನ್​ ಕೋಪಕ್ಕೆ ಕಾರಣವಾಗಿದೆ ಎಂದು ರಷ್ಯಾ ಉನ್ನತ ರಾಯಭಾರಿಯೊಬ್ಬರು ತಿಳಿಸಿದ್ದು, ಕರಪತ್ರಗಳ ಹಿಂದೆ ದಕ್ಷಿಣ ಕೊರಿಯಾ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.

ಕರಪತ್ರಗಳು ದಕ್ಷಿಣ ಕೊರಿಯಾದ ಯೋಜಿತ ಪ್ರಚಾರವೆಂದು ಆರೋಪಿಸಿರುವ ಉತ್ತರ ಕೊರಿಯಾ, ಕಟುವಾದ ಖಂಡನೆಯನ್ನು ವ್ಯಕ್ತಪಡಿಸಿದೆ. ದಕ್ಷಿಣದಲ್ಲಿ ನೆಲೆಸಿರುವ ದೋಷಪೂರಿತರು ಮಿಲಿಟರಿ ಗಡಿಯುದ್ದಕ್ಕೂ ಆಕಾಶಬುಟ್ಟಿಗಳು ಅಥವಾ ಬಾಟಲಿಗಳಲ್ಲಿ ಕರಪತ್ರಗಳನ್ನು ತೇಲಿಬಿಡುತ್ತಿದ್ದಾರೆ ಎಂದು ಉತ್ತರ ಕೊರಿಯಾ ಕಿಡಿಕಾರಿದೆ.

ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ನಿರಂತರವಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಆದರೆ, ಈ ಬಾರಿ ಉ. ಕೊರಿಯಾ ತುಂಬಾ ಆಕ್ರೋಶಗೊಂಡಿದ್ದು, ಎದುರಾಳಿ ರಾಷ್ಟ್ರಕ್ಕೆ ಮಿಲಿಟರಿ ಕ್ರಮದ ಎಚ್ಚರಿಕೆಯನ್ನು ರವಾನಿಸಿದೆ.

ಉ.ಕೊರಿಯಾದ ಪ್ರಥಮ ಮಹಿಳೆ ಹಾಗೂ ಕಿಮ್​ ಜಾಂಗ್​ ಉನ್​ ಪತ್ನಿ ರಿ ಸೊಲ್​ ಜು ಅವರನ್ನು ಟಾರ್ಗೇಟ್​ ಮಾಡಲಾಗಿದ್ದು, ಅವರ ಅಶ್ಲೀಲ ಚಿತ್ರಗಳನ್ನು ಎಡಿಟ್​ ಮಾಡಿ ಹರಿಬಿಟ್ಟಿರುವುದು ಕೊರಿಯಾ ಕೋಪಕ್ಕೆ ಮುಖ್ಯ ಕಾರಣವಾಗಿದೆ ಎಂದು ಉ.ಕೊರಿಯಾ ರಷ್ಯಾ ರಾಯಭಾರಿ ಅಲೆಕ್ಸಂಡರ್​ ಮ್ಯಾಟ್ಸೆಗೊರಾ ತಿಳಿಸಿದ್ದಾರೆ.

ಕರಪತ್ರಗಳು ಕಿಮ್​ ಜಾಂಗ್​ ಉನ್​ ಸಂಗಾತಿಯ ಕೊಳಕು, ಅವಮಾನಕರ ಪ್ರಚಾರವನ್ನು ಹೊಂದಿವೆ. ಅವುಗಳನ್ನು ತುಂಬಾ ಕೆಳಮಟ್ಟದಲ್ಲಿ ಫೋಟೋಶಾಪ್​ ಮೂಲಕ ಚಿತ್ರೀಕರಿಸಲಾಗಿದೆ ಎಂದು ಮ್ಯಾಟ್ಸೆಗೊರಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಇದೇ ಮೊದಲೇನಲ್ಲಾ, ಏಳು ವರ್ಷಗಳ ಹಿಂದೆಯೂ ಇದೇ ರೀತಿ ಕರಪತ್ರಗಳನ್ನು ಹಂಚಲಾಗಿತ್ತು. ಅದರಲ್ಲಿ ರಿ ಸೊಲ್​ ಜು ಅವರು ಅಶ್ಲೀಲ ಚಿತ್ರವೊಂದರಲ್ಲಿ ನಟಿಸಿದ್ದಾರೆ ಎಂದು 2013 ರಲ್ಲಿ ಆ್ಯಕ್ಟಿವಿಸ್ಟ್​ ಗುಂಪೊಂದು ತಪ್ಪಾಗಿ ಬರೆದು ಕರಪತ್ರಗಳನ್ನು ಹಂಚಿದ್ದರು.

ಕಳೆದ ವರ್ಷದ ಆರಂಭದಲ್ಲಿ ಕಿಮ್ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಶೃಂಗಸಭೆಯ ವಿಫಲದ ಬಳಿಕ ಅಂತರ್-ಕೊರಿಯಾದ ಸಂಬಂಧಗಳು ತೀವ್ರ ಸ್ಥಗಿತಗೊಂಡಿವೆ. ಅದರಲ್ಲೂ ಅಮೆರಿಕಗಿಂತ ದಕ್ಷಿಣ ಕೊರಿಯಾ ಕಂಡರೆ ಉ.ಕೊರಿಯಾಗೆ ಎಣ್ಣೆ-ಸೀಗೆಕಾಯಿಯಂತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net