

ಬೆಂಗಳೂರು: ಡೇಟಿಂಗ್ಗೆ ಯುವತಿ ಜತೆಗೆ ರೂಂ ಬುಕ್ ಮಾಡಿಕೊಡುವ ಆಮಿಷವೊಡ್ಡಿ ಯುವಕನಿಂದ 1.28 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚಿಸಿದ್ದಾರೆ.
ಹೆಬ್ಬಾಳದ 30 ವರ್ಷದ ಯುವಕ ವಂಚನೆಗೆ ಒಳಗಾದವ. ಜೂ.18ರಂದು ಯುವಕನ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, 1,500 ರೂ. ಶುಲ್ಕ ಪಾವತಿ ಮಾಡಿದರೆ ಡೇಟಿಂಗ್ ವೆಬ್ಸೈಟ್ನಲ್ಲಿ ಲಾಗಿನ್ ಐಡಿ ಕ್ರಿಯೇಟ್ ಮಾಡಿಕೊಡುವುದಾಗಿ ಆಮಿಷ ವೊಡ್ಡಿದ್ದ. ಅದನ್ನು ನಂಬಿದ ಯುವಕ, ಮೊದಲು ಆನ್ಲೈನ್ನಲ್ಲಿ 1,500 ರೂ. ಪಾವತಿ ಮಾಡಿದ್ದ. ಯುವಕನಿಗೆ ಲಾಗಿನ್ ಐಡಿ ನೀಡಿದ ವಂಚಕ, ಡೇಟಿಂಗ್ ಯುವತಿಯರ ಜತೆಗೆ ಚಾಟಿಂಗ್ ಮಾಡಲು ಅವಕಾಶ ಬೇಕೆಂದರೆ 28 ಸಾವಿರ ರೂ. ಪಾವತಿಸುವಂತೆ ಕೇಳಿದ್ದಾನೆ. ಯುವಕ, ಆಗಲೂ 28 ಸಾವಿರ ರೂ. ಪಾವತಿ ಮಾಡಿದ್ದ. ಆಗ ಕೆಲಕಾಲ ಯುವತಿಯರ ಜತೆ ಚಾಟಿಂಗ್ ಮಾಡಲು ವಂಚಕರು ಅವಕಾಶ ಕಲ್ಪಿಸಿದ್ದರು.
ನಂತರ ವಂಚಕರು ಮತ್ತೆ ಯುವಕನಿಗೆ ಕರೆ ಮಾಡಿ 18 ಸಾವಿರ ರೂ. ಪಾವತಿ ಮಾಡಿದರೆ ಹೋಟೆಲ್ನಲ್ಲಿ ಬುಕ್ ಮಾಡಿ ಅಲ್ಲಿಗೆ ಯುವತಿಯನ್ನು ಕಳುಹಿಸುತ್ತೇವೆ. ಆಕೆಯೊಂದಿಗೆ ಎಷ್ಟು ಸಮಯ ಬೇಕಾದರೂ ಕಳೆಯಬಹುದು ಎಂದು ಆಮಿಷವೊಡ್ಡಿದ್ದರು. ಯುವತಿ ಸಂಗಕ್ಕೆ ಹಾತೊರೆದ ಯುವಕ ಹಣವನ್ನು ಪಾವತಿ ಮಾಡಿದ್ದ. ಬಳಿಕ ಜಿಎಸ್ಟಿ ಇನ್ನಿತರ ನೆಪದಲ್ಲಿ ವಂಚಕರು 1.28 ಲಕ್ಷ ರೂ. ಪಡೆದಿದ್ದರು. ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಡೇಟಿಂಗ್ಗೆ ಹಾತೊರೆವವರೇ ಟಾರ್ಗೆಟ್
ಸಾಮಾಜಿಕ ಜಾಲತಾಣಗಳಲ್ಲಿ ಡೇಟಿಂಗ್ ಯುವತಿಯರು ಅಥವಾ ವೇಶ್ಯೆಯರ ಮಾಹಿತಿಗಾಗಿ ಹುಡುಕಾಟ ನಡೆಸುವರ ಮೊಬೈಲ್ ನಂಬರ್ಗಳನ್ನು ತಂತ್ರಜ್ಞಾನ ಬಳಸಿ ವಂಚಕರು ಸಂಗ್ರಹಿಸುತ್ತಾರೆ. ಆ ನಂತರ ಅಂತವರಿಗೆ ಕರೆ ಮಾಡಿ ಬಲೆ ಬೀಸುತ್ತಾರೆ ಎಂದು ಸೈಬರ್ ಕ್ರೖೆಂ ಪೊಲೀಸರು ತಿಳಿಸಿದ್ದಾರೆ.