ಬಹು ನಿರೀಕ್ಷಿತ BRB ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ: ಬಾಷಾ ಪಾತ್ರದ ಪವರ್​ಫುಲ್​ ಲುಕ್​ ಅನಾವರಣ! Kichcha Sudeep

Kichcha Sudeep
Published on

Kichcha Sudeep : ಕನ್ನಡ ಚಿತ್ರರಂಗದ ಧ್ರುವತಾರೆ, ಸ್ಟೈಲ್​ ಐಕಾನ್​, ಅಭಿನಯ ಚಕ್ರವರ್ತಿ ಹಾಗೂ ಎಲ್ಲರ ನೆಚ್ಚಿನ ಬಾದ್​ಷಾ ಕಿಚ್ಚ ಸುದೀಪ್​ ಇಂದು (ಸೆ.02) 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಮೂಲಿಯಂತೆಯೇ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿನಿಮಾಗಳ ಅಪ್​ಡೇಟ್​ನೊಂದಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ಪ್ರತಿಬಾರಿ ಮನೆಯ ಮುಂದೆ ಸುದೀಪ್​ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಹಾರ-ತುರಾಯಿ, ಕೇಕ್​ ಮತ್ತು ಗಿಫ್ಟ್​ ಸೇರಿದಂತೆ ಯಾವುದನ್ನು ತೆಗೆದುಕೊಂಡು ಬರಬೇಡಿ, ಅದೇ ಹಣದಲ್ಲಿ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಿ ಎಂದು ಕೋರಿದ್ದರು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸುದೀಪ್​ ಅವರ ತಮ್ಮ ಮನೆಯ ಮುಂದೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ತಮ್ಮ ತಾಯಿ ತೀರಿ ಇನ್ನು ವರ್ಷ ಕೂಡ ಕಳೆಯದೇ ಇರುವುದರಿಂದ ಮನೆಯಲ್ಲಿ ಸಂಭ್ರಮಾಚರಣೆ ಮಾಡಲಿಲ್ಲ. ಆದರೂ ಅಭಿಮಾನಿಗಳಿಗೆ ನಿರಾಸೆ ಮಾಡದೇ ನಾಯಂಡಹಳ್ಳಿ ಸಮೀಪದ ನಂದಿ ಲಿಂಕ್ಸ್​ ಗ್ರೌಂಡ್​ನಲ್ಲಿ ಅಭಮಾನಿಗಳ ಸಮ್ಮುಖದಲ್ಲಿ ಸುದೀಪ್​ ಅವರು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.

ನಿನ್ನೆ ಕಿಚ್ಚ 47 ಸಿನಿಮಾದ ಟೈಟಲ್​ ಟೀಸರ್​ ಬಿಡುಗಡೆಯಾಯಿತು. ಈ ಚಿತ್ರಕ್ಕೆ ಮಾರ್ಕ್​ ಎಂದು ಹೆಸರಿಡಲಾಗಿದ್ದು, ಡಿಸೆಂಬರ್​ 25ಕ್ಕೆ ಕ್ರಿಸ್​ಮಸ್​ ಹಬ್ಬದಂದು ಬಿಡುಗಡೆಯಾಗುತ್ತದೆ. ಈ ಚಿತ್ರದನ್ನು ಮ್ಯಾಕ್ಸ್​ ಡೈರೆಕ್ಟರ್​ ವಿಜಯ್​ ಕಾರ್ತಿಕೇಯ ಅವರೇ ನಿರ್ದೇಶಿಸಿದ್ದಾರೆ. ಎರಡನೇ ಭಾರಿ ಯಶಸ್ವಿ ಸಿನಿಮಾ ತಂಡ ಒಟ್ಟಿಗೆ ಸೇರಿದೆ.

ಬಂತೂ ಬಹು ನಿರೀಕ್ಷಿತ ಸಿನಿಮಾದ ಅಪ್​ಡೇಟ್​

ಹೌದು, ಎಲ್ಲ ನಿರೀಕ್ಷೆ ಇರುವುದು ಬಿಲ್ಲ ರಂಗ ಬಾಷಾ ಸಿನಿಮಾದ ಮೇಲೆ. ಸುದೀಪ್​ ಅವರೇ ಹೇಳಿದಂತೆ ಇದು ಅವರ ವೃತ್ತಿಜೀವನದ ಅತಿದೊಡ್ಡ ಸಿನಿಮಾ. ಈಗಾಗಲೇ ಶೂಟಿಂಗ್​ ಆರಂಭವಾಗಿದ್ದು, ಒಂದು ಶೆಡ್ಯೂಲ್​ ಕಂಪ್ಲೀಟ್​ ಆಗಿದೆ. ಹುಟ್ಟುಹಬ್ಬ ಹಿನ್ನೆಲೆ ಇಂದು ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಯಾಗಿದೆ. ಅನೂಪ್​ ಭಂಡಾರಿ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟರ್​ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರಗಳಿದ್ದು, ಅದರಲ್ಲಿ ಒಂದು ಪಾತ್ರವನ್ನು ಪರಿಚಯಿಸಿದ್ದಾರೆ. ಪೋಸ್ಟರ್​ನಲ್ಲಿ ನೀಡಿರುವ ಸುಳಿವು ಪ್ರಕಾರ ಬಾಷಾ ಪಾತ್ರವನ್ನು ಅನೂಪ್​ ಪರಿಚಯಿಸಿದ್ದಾರೆ. ಪೋಸ್ಟರ್​ನಲ್ಲಿ ಸುದೀಪ್​ ಅವರು ದೊಡ್ಡ ಬಂದೂಕು ಹಿಡಿದಿದ್ದು, ಅದರಲ್ಲಿ ತ್ರಿಶೂಲ ಗುರುತು ಇದೆ. ಪೋಸ್ಟರ್​ನ ಒಂದು ಬದಿಯಲ್ಲೂ ತ್ರಿಶೂಲ ಗುರುತು ಇದೆ. ಇನ್ನು ಟೈಟಲ್​ನಲ್ಲಿ ತ್ರಿಶೂಲ ಗುರುತು ಸೂಚಿಸುವುದು ಬಾಷಾ ಪಾತ್ರಕ್ಕೆ. ಅಂದಹಾಗೆ ಬಿಲ್ಲ ರಂಗ ಬಾಷಾ ಪಾತ್ರಗಳು ಬ್ರಹ್ಮ ವಿಷ್ಣು ಮಹೇಶ್ವರನಿಗೆ ಲಿಂಕ್​ ಆಗುತ್ತದೆ. ಬಿಲ್ಲ ಕಮಲದ ಗುರುತನ್ನು ಹೊಂದಿದೆ ಅಂದರೆ, ಅದು ಬ್ರಹ್ಮನ ಗುರುತು. ಅದೇ ರೀತಿ ರಂಗ ಸುದರ್ಶನ ಚಕ್ರ ಗುರುತು ಇದೆ. ಅದು ವಿಷ್ಣುವಿನ ಗುರುತು ಮತ್ತು ತ್ರಿಶೂಲ ಮಹೇಶ್ವರನ ಗುರುತು. ಹೀಗಾಗಿ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಮಂಡಿಯೂರದವನಿಗೆ ಹೆದರುತ್ತದೆ

ಬಿಆರ್​ಬಿ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿರುವ ನಿರ್ದೇಶಕ ಅನೂಪ್​ ಭಂಡಾರಿ, ಕಿಚ್ಚ ಸುದೀಪ್​ ಅವರಿಗೆ ಶುಭ ಕೋರಿದ್ದಾರೆ. ಜನ್ಮದಿನದ ಶುಭಾಶಯಗಳು ಸರ್, ಈ ವರ್ಷವೂ ನಿಮ್ಮ ಪರಂಪರೆಯಷ್ಟೇ ಜೋರಾಗಿ ಘರ್ಜಿಸಲಿ ಎಂದಿದ್ದಾರೆ. ಅಲ್ಲದೆ, ಪ್ರತಿಯೊಂದು ಸಾಮ್ರಾಜ್ಯವೂ ಮಂಡಿಯೂರಿ ನಿರಾಕರಿಸುವವನಿಗೆ ಹೆದರುತ್ತದೆ ಎಂದು ಪೋಸ್ಟರ್​ ಬಗ್ಗೆ ಬರೆದುಕೊಂಡಿದ್ದಾರೆ. ಅಲ್ಲದೆ, ನೀವು ಬಂಡಾಯಗಾರನನ್ನು ಸಾಯಿಸಬಹುದು ಆದರೆ, ದಂಗೆಯನ್ನಲ್ಲ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ. ಈ ಚಿತ್ರದ ಪರಿಕಲ್ಪನೆಯೇ ವಿಭಿನ್ನವಾಗಿದ್ದು, ಈಗಾಗಲೇ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಈ ಸಿನಿಮಾ ಮುಂದಿನ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.

ಅಂದಹಾಗೆ ಬಿಲ್ಲಾ ರಂಗ ಬಾಷಾ ಸಿನಿಮಾ ಕಥೆಯು 2209 A.D ನಲ್ಲಿ ನಡೆಯುತ್ತದೆ. ಅಂದರೆ ಮುಂದಿನ 200 ವರ್ಷಗಳ ಕಾಲ್ಪನಿಕ ಕತೆ ಇದಾಗಿದ್ದು, ಸ್ಟೋರಿ ಲೈನ್​ನಿಂದಲೇ ಬಿಲ್ಲ ರಂಗ ಬಾಷಾ ಸಿನಿಮಾ ಅಭಿಮಾನಿಗಳಲ್ಲಿ ಹೊಸ ಕಿಚ್ಚು ಹುಟ್ಟುಹಾಕಿದೆ. ಕನ್ನಡದ ಮಟ್ಟಿಗೆ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ನಿರ್ದೇಶಕ ಅನೂಪ್​ ಭಂಡಾರಿ ಅವರು ಕೈಹಾಕಿದ್ದಾರೆ.

2018ರಲ್ಲಿ ಘೋಷಣೆಯಾದ ಸಿನಿಮಾ

ಬಿಲ್ಲ ರಂಗ ಬಾಷಾ ಸಿನಿಮಾ 2018ರಲ್ಲೇ ಘೋಷಣೆಯಾಯಿತು. ವಿಕ್ರಾಂತ್​ ರೋಣ ಸಿನಿಮಾಗೂ ಮುಂಚೆಯೇ ಅನೂಪ್​ ಅವರು ಬಿಆರ್​ಬಿ ಸಿನಿಮಾವನ್ನು ಘೋಷಣೆ ಮಾಡಿದ್ದರು. ಆದರೆ, ಆಗಿನ್ನು ಸ್ಕ್ರಿಪ್ಟ್​ ಕೆಲಸ ಇನ್ನೂ ಪೂರ್ಣಗೊಂಡಿರಲಿಲ್ಲ. ಅಲ್ಲದೆ, ಇದೊಂದು ಫ್ಯೂಚರಿಸ್ಟಿಕ್​ ಸಿನಿಮಾ ಆಗಿದ್ದು, ಸಾಕಷ್ಟು ಪ್ಲಾನಿಂಗ್​ ಬೇಕಿತ್ತು ಮತ್ತು ಬಿಗ್​ ಬಜೆಟ್​ ಸಿನಿಮಾ ಆಗಿದ್ರಿಂದ ಸಾಕಷ್ಟು ತಯಾರಿ ಬೇಕಿತ್ತು. ಈ ಕಾರಣಕ್ಕೆ ಈ ಸಿನಿಮಾವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದರು. ಇದರ ನಡುವೆ ವಿಕ್ರಾಂತ್​ ರೋಣ ಸಿನಿಮಾ ಮಾಡಿದರು. ಅಂದಹಾಗೆ, ವಿಕ್ರಾಂತ್​ ರೋಣ ಸಿನಿಮಾ ಸುದೀಪ್​ ಅವರಿಗಾಗಿ ಬರೆದ ಕತೆಯಲ್ಲ. ಆದರೆ, ಸುದೀಪ್ ಅವರಿಗೆ ಆ ಕತೆ ಇಷ್ಟ ಆಗಿ ತಾವೇ ಆ ಸಿನಿಮಾ ಮಾಡಿದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net