

Rajasthan Man : ಬಾಹ್ಯ ಸೌಂದರ್ಯ ಶಾಶ್ವತವಲ್ಲ ಅನ್ನೋದು ಬಹಳಷ್ಟು ಬುದ್ಧಿಗೇಡಿ ಮಂದಿಗೆ ಇನ್ನು ತಿಳಿದೇ ಇಲ್ಲ. ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡದ ಎಷ್ಟೋ ಮಂದಿ ಬಾಹ್ಯ ರೂಪದ ಬಲೆಗೆ ಬಿದ್ದು ಅಕ್ಷರಶಃ ಮೃಗಗಳಂತೆ ವರ್ತಿಸುತ್ತಿದ್ದಾರೆ. ಅವರ ಕ್ರೂರತ್ವಕ್ಕೆ ಎಷ್ಟೋ ಮಂದಿ ಅಮಾಯಕರು ಬಲಿಯಾಗಿದ್ದಾರೆ. ಕೆಲವರು ಇಂದಿಗೂ ನೋವಿನ ಕೂಪದಲ್ಲಿ ನರಳುತ್ತಿದ್ದಾರೆ. ಈ ರೀತಿಯ ಮೃಗೀಯ ವರ್ತನೆಗೆ ಮತ್ತೊಂದು ಘಟನೆ ತಾಜಾ ಸಾಕ್ಷಿಯಾಗಿದೆ.
ಹೌದು, ತನ್ನ ಪತ್ನಿ ಕಪ್ಪಗಿದ್ದಾಳೆ ಅಂತ ಆಕೆಗೆ ನಿತ್ಯವು ಕಿರುಕುಳ ನೀಡಿದಲ್ಲದೆ, ಪಾಪಿ ಗಂಡನೊಬ್ಬ ಆಕೆಗೆ ಆ್ಯಸಿಡ್ ಹಾಕಿ, ಬೆಂಕಿ ಹಚ್ಚಿ ಕೊಲೆಗೈದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೃತಳನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಆಕೆಯ ಪತಿ ಕಿಶನ್, ಈ ಘೋರ ಕೃತ್ಯವನ್ನು ಎಸಗಿದ್ದಾನೆ.
ನಿನ್ನ ಮೈಬಣ್ಣ ಕಪ್ಪು ಅಂತ ನಿತ್ಯವೂ ಪತ್ನಿಗೆ ನರಕ ತೋರಿಸುತ್ತಿದ್ದ ಕಿಶನ್, ಒಂದು ದಿನ ರಾತ್ರಿ ತನ್ನ ಹೆಂಡತಿಗೆ ನಿನಗಾಗಿ ಒಂದು ಔಷಧಿಯನ್ನು ತಂದಿದ್ದೇನೆ ಎಂದು ಹೇಳಿ ಆಕೆಯ ದೇಹಕ್ಕೆ ಹಚ್ಚಿದ್ದಾನೆ. ಈ ವೇಳೆ ಆ್ಯಸಿಡ್ ವಾಸನೆ ಬರುತ್ತಿದೆ ಎಂದು ಆಕೆ ಹೇಳಿದ್ದಾಳೆ. ಆದರೆ, ಆಕೆಯ ಮಾತನ್ನು ಕೇಳದ ಕಿಶನ್, ನಂತರ ಆಕೆಯ ಹೊಟ್ಟೆಯನ್ನು ಗಂಧದ ಕಡ್ಡಿಯನ್ನು ಸುಟ್ಟಿದ್ದಾನೆ. ಈ ವೇಳೆ ಆ್ಯಸಿಡ್ನಿಂದಾಗಿ ಬೆಂಕಿ ಹೊತ್ತಿಕೊಂಡಿತು. ಆಕೆ ಬೆಂಕಿಯಲ್ಲಿ ಉರಿಯುತ್ತಿರುವಾಗ, ಉಳಿದ ಔಷಧವನ್ನೂ ಆಕೆಯ ದೇಹದ ಮೇಲೆ ಆತ ಸುರಿದಿದ್ದಾನೆ. ಇದರಿಂದ ಗಂಭೀರ ಸುಟ್ಟ ಗಾಯಗಳಿಂದ ನರಳಿ... ನರಳಿ... ಲಕ್ಷ್ಮೀ ಪ್ರಾಣ ಬಿಟ್ಟಳು.
ಉದಯಪುರದ ವಲ್ಲಭನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಕಿಶನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ದಿನೇಶ್ ಪಲಿವಾಲ್ ವಾದ ಮಂಡಿಸಿ, ಆರೋಪಿಯು ತನ್ನ ಹೆಂಡತಿಯ ಕಪ್ಪಗಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ನಿತ್ಯವು ನಿಂದಿಸುತ್ತಿದ್ದನು. ಅಲ್ಲದೆ, ಆಕೆಯ ದೇಹದ ಮೇಲೆ ಆ್ಯಸಿಡ್ ಸುರಿದು ಬೆಂಕಿ ಹಚ್ಚಿದನು. ತೀವ್ರ ಸುಟ್ಟಗಾಯಗಳಿಂದಾಗಿ ಮಹಿಳೆ ಮೃತಪಟ್ಟಿದ್ದಾಳೆ ಎಂದರು.
ಈ ಸಂಬಂಧ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಸಮಾಜದಲ್ಲಿ ನ್ಯಾಯಾಲಯ ಮೇಲಿನ ಭಯವನ್ನು ಜೀವಂತವಾಗಿಡಲು, ಆ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಹೇಳಿದರು. (ಏಜೆನ್ಸೀಸ್)