ಉಗ್ರರನ್ನು ಸೆದೆಬಡಿಯುವ ಭಾರತದ ದಿಟ್ಟ ಹೋರಾಟಕ್ಕೆ ಚೀನಾ ಬೆಂಬಲ: ಪಾಕಿಸ್ತಾನ ವಿಲವಿಲ​! PM Modi

PM Modi
Published on

PM Modi : ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಚೀನಾ ಬೆಂಬಲ ನೀಡಿದೆ. ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಈ ಬೆಂಬಲ ವ್ಯಕ್ತವಾಗಿದೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ (ಆಗಸ್ಟ್​ 31) ತಿಳಿಸಿದೆ.

ಈ ಮಹತ್ವದ ಸಭೆಯಲ್ಲಿ ಉಭಯ ದೇಶಗಳ ನಡುವೆ ವ್ಯಾಪಾರವನ್ನು ಹೆಚ್ಚಿಸುವ, ಗಡಿಯಲ್ಲಿ ಶಾಂತಿಯನ್ನು ಸ್ಥಾಪಿಸುವ ಮತ್ತು ಎರಡು ದೇಶಗಳ ಜನರ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಚರ್ಚೆಯಾದ ನಿರ್ದಿಷ್ಟ ವಿಷಯಗಳನ್ನು ಹೊರತುಪಡಿಸಿ, ನಾನು ಹೇಳುವುದೇನೆಂದರೆ, ಪ್ರಧಾನಿ ಮೋದಿ ಅವರು ತಮ್ಮ ತಿಳುವಳಿಕೆಯನ್ನು ಬಹಳ ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ವಿವರಿಸಿದರು. ಭಯೋತ್ಪಾದನೆ ವಿಷಯದ ಬಗ್ಗೆ ಮೋದಿ ಅವರು ಚೀನಾದ ಬೆಂಬಲವನ್ನು ಕೇಳಿದರು. ಅದರಂತೆ ಚೀನಿಯರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿಯವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ಆದ್ಯತೆಯ ವಿಷಯವೆಂದು ಉಲ್ಲೇಖಿಸಿದ್ದಾರೆ. ಇದು ಭಾರತ ಮತ್ತು ಚೀನಾ ಎರಡರ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನಾವಿಬ್ಬರೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವಾಗ ಪರಸ್ಪರ ತಿಳುವಳಿಕೆ ಮತ್ತು ಬೆಂಬಲವನ್ನು ನೀಡುವುದು ಮುಖ್ಯವಾಗಿದೆ ಎಂಬುದನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ನಿಜ ಹೇಳಬೇಕೆಂದರೆ, ಭಯೋತ್ಪಾದನೆ ವಿಚಾರದಲ್ಲಿ ಚೀನಾದ ಕಡೆಯಿಂದಲೂ ಸಾಕಷ್ಟು ತಿಳುವಳಿಕೆ ಮತ್ತು ಬೆಂಬಲವಿದೆ ಎಂದು ಹೇಳಲು ಬಯಸುತ್ತೇನೆ. ಪ್ರಸ್ತುತ ನಡೆಯುತ್ತಿರುವ SCO ಶೃಂಗಸಭೆಯ ಸಂದರ್ಭದಲ್ಲಿ ನಾವು ಗಡಿಯಾಚೆಗಿನ ಭಯೋತ್ಪಾದನೆಯ ವಿಷಯವನ್ನು ಹೆಚ್ಚಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಮಿಶ್ರಿ ಅವರು ಹೇಳಿದರು.

ಗಮನಾರ್ಹ ಸಂಗತಿ ಏನೆಂದರೆ, ಪಾಕಿಸ್ತಾನದ ಸರ್ವಕಾಲಿಕ ಮಿತ್ರ ರಾಷ್ಟ್ರ ಎನಿಸಿಕೊಂಡಿರುವ ಚೀನಾ, ಕಳೆದ ಜೂನ್‌ನಲ್ಲಿ ನಡೆದ SCO ಸಭೆಯಲ್ಲಿ ಜಂಟಿ ಹೇಳಿಕೆಯಲ್ಲಿ ಪಹಲ್ಗಾಮ್ ದಾಳಿಯ ಬಗ್ಗೆ ಯಾವುದೇ ಮಾತನ್ನು ಆಡಿರಲಿಲ್ಲ. ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸುವ ಬದಲು, ಚೀನಾ ತನ್ನ ಹೇಳಿಕೆಯಲ್ಲಿ ಬಲೂಚಿಸ್ತಾನದಲ್ಲಿ ನಡೆದ ದಾಳಿಯ ಘಟನೆಗಳನ್ನು ಪ್ರಸ್ತಾಪಿಸಿ, ಭಾರತದ ಒಳಗೊಳ್ಳುವಿಕೆ ಬಗ್ಗೆ ಮಾತನಾಡಿದ್ದರು. ಅಲ್ಲದೆ, 2020ರಲ್ಲಿ ಗಲ್ವಾನ್ ಘರ್ಷಣೆ ಆದಾಗಿನಿಂದಲೂ ಉಭಯ ದೇಶಗಳ ಸಂಬಂಧ ತೀವ್ರವಾಗಿ ಹದಗೆಟ್ಟಿತು.​ ಆದರೆ, ಈ ಎಲ್ಲ ಸನ್ನಿವೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬದಲಾಯಿಸಿದ್ದಾರೆ.

ರಷ್ಯಾ ಬಳಿ ಇಂಧನ ಖರೀದಿ ಮಾಡುತ್ತಿರುವುದಕ್ಕೆ ದಂಡನೆಯಾಗಿ ಮೊದಲು ಘೋಷಣೆ ಮಾಡಿದ್ದ 25 ರಷ್ಟು ಸುಂಕಕ್ಕೆ ಹೆಚ್ಚುವರಿಯಾಗಿ 25 ರಷ್ಟು ಸುಂಕವನ್ನು ಸೇರಿಸಿ, ಒಟ್ಟು 50 ರಷ್ಟು ಸುಂಕ ವಿಧಿಸುವ ಮೂಲಕ ಟ್ರಂಪ್​, ಭಾರತದ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಯಾವಾಗ ಸುಂಕ ಹೆಚ್ಚಳವಾಯಿತೋ ಅದು ಭಾರತ ಮತ್ತು ಚೀನಾವನ್ನು ಒಟ್ಟುಗೂಡಿಸಿದೆ. ಚೀನಾಗೂ ಅಮೆರಿಕಕ್ಕೂ ಆಗುವುದಿಲ್ಲ. ಹೀಗಿರುವಾಗ ಭಾರತ, ಚೀನಾ ಜೊತೆ ಉತ್ತಮ ಸಂಬಂಧ ಸ್ಥಾಪಿಸುತ್ತಿದ್ದು, ಪರೋಕ್ಷವಾಗಿ ಟ್ರಂಪ್​ ಸುಂಕ ಸಮರಕ್ಕೆ ತಿರುಗೇಟು ನೀಡಿದೆ.

ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು ಹಾಗೂ ಭಯೋತ್ಪಾದನೆಯಂತಹ ಸವಾಲುಗಳ ಕುರಿತು ಸಾಮಾನ್ಯ ನೆಲೆಯನ್ನು ವಿಸ್ತರಿಸುವುದು ಅಗತ್ಯವೆಂದು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಪರಿಗಣಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತಕ್ಕೆ ಪಾಕ್​ ಮಗ್ಗಲು ಮುಳ್ಳಾಗಿದ್ದರೆ, ಚೀನಾಗೆ ಪೂರ್ವ ಟರ್ಕಿಸ್ತಾನದ ಕ್ಸಿನ್‌ಜಿಯಾಂಗ್‌ನಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಹೊರಹೊಮ್ಮುವ ಸಾಧ್ಯತೆ ಹೆಚ್ಚುತ್ತಿದೆ. ಚೀನಾ ಅವರನ್ನು ಈಗಾಗಲೇ ಭಯೋತ್ಪಾದಕ ಪಡೆಗಳು ಎಂದು ಕರೆದಿದೆ. ಅಲ್ಲದೆ, ಚೀನಾದ ಜಾಗತಿಕ ಹೆಜ್ಜೆಗುರುತು ವಿಸ್ತರಿಸುತ್ತಿದ್ದಂತೆ ವಿದೇಶಗಳಲ್ಲಿ ವಾಸಿಸುವ ಚೀನೀ ಪ್ರಜೆಗಳಿಗೆ ಭಯೋತ್ಪಾದನೆಯ ಬೆದರಿಕೆಯೂ ಹೆಚ್ಚಾಗಿದೆ. ಇದರೊಂದಿಗೆ, ಭಯೋತ್ಪಾದನೆಯ ಬಗ್ಗೆ ಬೀಜಿಂಗ್‌ನ ಎಚ್ಚರಿಕೆಯ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ಉಭಯ ದೇಶಗಳು ಪ್ರಮುಖವಾಗಿ ಚರ್ಚಿಸಿವೆ ಎಂದು ತಿಳಿದುಬಂದಿದೆ.

ಅಂದಹಾಗೆ, ಇಂದು ನಡೆಯಲಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ, ಪ್ರಧಾನಿ ಮೋದಿ ಅವರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಮುಖಾಮುಖಿಯಾಗಲಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು SCO ಶೃಂಗಸಭೆಯಲ್ಲಿ ನೇರವಾಗಿ ಭಾಗವಹಿಸುತ್ತಿರುವುದು ಇದೇ ಮೊದಲು. 2023 ರಲ್ಲಿ ಭಾರತ SCO ಶೃಂಗಸಭೆಯನ್ನು ಆಯೋಜಿಸಿತ್ತು. ಆದರೆ, ಶೃಂಗಸಭೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು. ಇದಾದ ಬಳಿಕ 2024 ರಲ್ಲಿ ಮೋದಿ ಅವರು ಕಝಾಕಿಸ್ತಾನ್‌ನಲ್ಲಿ ನಡೆದ ಶೃಂಗಸಭೆಯನ್ನು ತಪ್ಪಿಸಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net