ಕೊನೆಯ 12 ಎಸೆತಗಳಲ್ಲಿ 11 ಸಿಕ್ಸರ್​, ಒಂದೇ ಓವರ್​ನಲ್ಲಿ 40 ರನ್... ಯುವ ಕ್ರಿಕೆಟಿಗನ ಅಬ್ಬರಕ್ಕೆ ಬೆರಗಾದ ಕ್ರೀಡಾ ಜಗತ್ತು! KCL 2025

KCL 2025
Published on

KCL 2025 : ಪ್ರಸ್ತುತ ನಡೆಯುತ್ತಿರುವ ಕೇರಳ ಕ್ರಿಕೆಟ್ ಲೀಗ್​ನಲ್ಲಿ ಒಂದು ಅದ್ಭುತ ದಾಖಲೆ ಕ್ರಿಕೆಟ್​ ಇತಿಹಾಸ ಪುಟಕ್ಕೆ ಸೇರಿಕೊಂಡಿದೆ. ಸಲ್ಮಾನ್ ನಿಜಾರ್ ಹೆಸರಿನ 28 ವರ್ಷದ ಯುವ ಕ್ರಿಕೆಟಿಗ ಕೊನೆಯ ಎರಡು ಓವರ್​ಗಳಲ್ಲಿ 11 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ನಿಜಾರ್​ ಅವರ ಬ್ಯಾಟಿಂಗ್​ ನೋಡಿ ಕ್ರೀಡಾಭಿಮಾನಿಗಳು ಹುಬ್ಬೇರಿಸಿದ್ದಾರೆ.

ಕೇರಳ ಕ್ರಿಕೆಟ್ ಲೀಗ್ 2025 ರ ಭಾಗವಾಗಿ ಶನಿವಾರ (ಆಗಸ್ಟ್​ 30) ತಿವೆಂಡ್ರಮ್ ರಾಯಲ್ಸ್ ಮತ್ತು ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ಮೊದಲು ಬ್ಯಾಟಿಂಗ್​ ಮಾಡಿತು. 18 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 115 ರನ್ ಗಳಿಸಿತ್ತು. ಅಷ್ಟರಲ್ಲಾಗಲೇ ನಿಜಾರ್​ ಅವರು ಕ್ರೀಸ್‌ನಲ್ಲಿದ್ದರು.

ನಿಜಾರ್​ ಅವರು ಆರಂಭದಲ್ಲಿ ಬ್ಯಾಟಿಂಗ್ ಮಾಡಲು ತುಂಬಾ ತಡಕಾಡಿದರು. ಆದರೆ, ಕೊನೆಯ ಎರಡು ಓವರ್‌ಗಳಲ್ಲಿ ವಿನಾಶವನ್ನೇ ಸೃಷ್ಟಿ ಮಾಡಿದರು. ಬಾಸಿಲ್ ಥಂಪಿ ಎಸೆದ 19ನೇ ಓವರ್​ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಮುಂದಿನ ಓವರ್‌ಗೆ ಸ್ಟ್ರೈಕ್‌ ಕಾಯ್ದುಕೊಂಡರು. 19ನೇ ಓವರ್‌ನಲ್ಲಿ ನಿಜಾರ್​ ಅವರು ಒಟ್ಟು 31 ರನ್‌ಗಳನ್ನು ಗಳಿಸಿದರು.

ಕೊನೆಯ ಓವರ್ ಅನ್ನು ಅಭಿಜಿತ್ ಪ್ರವೀಣ್ ಅವರು ಎಸೆದರು. ಸಲ್ಮಾನ್ ನಿಜಾರ್ ಅವರು ಮೊದಲ ಎಸೆತವನ್ನು ಸಿಕ್ಸರ್​ಗೆ ಅಟ್ಟಿದರು. ಮುಂದಿನ ಎಸೆತವನ್ನು ಪ್ರವೀಣ್​ ವೈಡ್​ ಮಾಡಿದರು. ಅದರ ಮುಂದಿನ ಎಸೆತ ನೋ-ಬಾಲ್ ಆಗಿತ್ತು ಮತ್ತು ಎರಡು ರನ್​ಗಳನ್ನು ಓಡಲಾಯಿತು. ಅದರ ನಂತರ, ಐದು ಎಸೆತಗಳಲ್ಲಿ ಸತತವಾಗಿ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಈ ಓವರ್‌ನಲ್ಲಿ ಸಲ್ಮಾನ್ ಆರು ಸಿಕ್ಸರ್‌ಗಳನ್ನು ಬಾರಿಸಿದರು. ಒಟ್ಟಾರೆಯಾಗಿ, ಈ ಓವರ್‌ನಲ್ಲಿ 40 ರನ್‌ಗಳು ಬಂದವು.

ಅಂತಿಮವಾಗಿ ಕ್ಯಾಲಿಕಟ್ ತಂಡವು ಕೊನೆಯ 12 ಎಸೆತಗಳಲ್ಲಿ 71 ರನ್ ಗಳಿಸಿತು. ಆ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಎರಡು ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ಇತಿಹಾಸವನ್ನು ಸೃಷ್ಟಿಸಿತು. ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 186 ರನ್ ಗಳಿಸಿತು.

ಸಲ್ಮಾನ್ ನಿಜಾರ್ (ಅಜೇಯ 86 ರನ್​, 26 ಎಸೆತ, 12 ಸಿಕ್ಸರ್‌ಗಳು) ಅದ್ಭುತ ಇನ್ನಿಂಗ್ಸ್ ಆಡಿದರೆ, ಮರುತುಂಗಲ್ ಅಜಿನಾಸ್ (51 ರನ್​, 50 ಎಸೆತ) ಅರ್ಧಶತಕ ಗಳಿಸಿದರು.

187 ರನ್​ಗಳ ಗುರಿಯನ್ನು ಬೆನ್ನಟ್ಟಿದ ತ್ರಿವೆಂಡ್ರಮ್​ ರಾಯಲ್ಸ್ ತಂಡ 19.3 ಓವರ್​ಗಳಲ್ಲಿ 173 ರನ್​ಗಳಿಗೆ ಸರ್ವಪತನಗೊಂಡಿತು. ಈ ಮೂಲಕ ಕ್ಯಾಲಿಕಟ್​ ತಂಡ 13 ರನ್​ಗಳ ಅಂತರದಲ್ಲಿ ಜಯ ದಾಖಲಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net