

Shot Dead: ಅಕ್ರಮವಾಗಿ ಇಸ್ರೇಲ್ ಗಡಿ ದಾಟಲು ಯತ್ನಿಸಿದ ಕೇರಳ ಮೂಲದ ಥಾಮಸ್ ಗೇಬ್ರಿಯಲ್ ಪೆರೆರಾ ಎಂಬ ವ್ಯಕ್ತಿಯನ್ನು ಜೋರ್ಡಾನ್ ಸೈನಿಕರು ಗುಂಡು ಹಾರಿಸಿ ಹತ್ಯೆಗೈದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಪೆರೆರಾ ಕೇರಳದ ಥಂಬಾ ಮೂಲದವರು ಎಂದು ವರದಿಯಾಗಿದೆ. ಸಂದರ್ಶಕ ವೀಸಾದಡಿ ಜೋರ್ಡಾನ್‌ಗೆ ಆಗಮಿಸಿದ್ದ ಥಾಮಸ್ರನ್ನು ಜೋರ್ಡಾನ್ ಸೈನಿಕರು ಫೆಬ್ರವರಿ 10ರಂದು ಗುಂಡಿಕ್ಕಿ ಕೊಂದಿದ್ದಾರೆ. ಭಾನುವಾರ (ಮಾ.03) ಜೋರ್ಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯಿಸಿ, "ಭಾರತೀಯ ಪ್ರಜೆಯ ನಿಧನ ದುರದೃಷ್ಟಕರ" ಎಂದು ತಿಳಿಸಿದೆ.
"ರಾಯಭಾರ ಕಚೇರಿಯು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಮೃತದೇಹ ಹಸ್ತಾಂತರಕ್ಕೆ ಜೋರ್ಡಾನ್ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಪೆರೆರಾ ಜತೆಗಿದ್ದ ಅವರ ಸಂಬಂಧಿ ಎಡಿಸನ್ ಕೂಡ ಗಡಿ ದಾಟಲು ಪ್ರಯತ್ನಿಸಿದ್ದರು. ಅವರ ಮೇಲೂ ಸೈನಿಕರು ಗುಂಡು ಹಾರಿಸಿದ್ದರು. ಆದರೆ, ಅದೃಷ್ಟವಶಾತ್ ಎಡಿಸನ್ ಸಾವಿನಿಂದ ಪಾರಾಗಿದ್ದಾರೆ.
ಗೇಬ್ರಿಯಲ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಅವರ ಪತ್ನಿ, "ಪತಿ ಜೋರ್ಡಾನ್ ಪ್ರವಾಸಕ್ಕೆ ತೆರಳುವುದರ ಕುರಿತು ನನಗೆ ಮೊದಲೇ ಮಾಹಿತಿ ಇತ್ತು. ಆದರೆ, ಅವರು ಇಸ್ರೇಲ್‌ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದ ವಿಷಯ ತಿಳಿದಿರಲಿಲ್ಲ. ಘಟನೆ ಸಂಭವಿಸುವ ಕೆಲವು ದಿನಗಳ ಹಿಂದೆ ನನಗೆ ಕರೆ ಮಾಡಿ ಮಾತನಾಡಿದ್ದರು. ಕೇವಲ 2 ನಿಮಿಷ ನನ್ನ ಜತೆ ದೂರವಾಣಿ ಸಂಪರ್ಕದಲ್ಲಿದ್ದ ಪತಿ, ನನಗಾಗಿ ಭಗವಂತನಲ್ಲಿ ಪ್ರಾರ್ಥಿಸು ಎಂದು ಕೇಳಿದ್ದರು" ಎಂದರು,(ಏಜೆನ್ಸೀಸ್).