

ನವದೆಹಲಿ: ಸದ್ಯ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ದೆಹಲಿ ಹೈಕೋರ್ಟ್ಗೆ ತೆರಳಿದ್ದು, ಇಡಿ ಸಮನ್ಸ್ಗೆ ಸಂಬಂಧಿಸಿದಂತೆ ಕೇಜ್ರಿವಾಲ್ರ ಮನವಿಯನ್ನು ನ್ಯಾಯಾಲಯ ಆಲಿಸಲಿದೆ. ಈ ಮಧ್ಯೆ ಜೈಲಿನಲ್ಲಿದ್ದು ಮಾವಿನಹಣ್ಣು, ಸ್ವೀಟ್ಸ್ ಸೇವಿಸಿದ ಆರೋಪದಡಿ ಕೇಜ್ರಿವಾಲ್ರನ್ನು ಇಡಿ ಪ್ರಶ್ನಿಸಿತ್ತು. ಸಕ್ಕರೆ ಖಾಯಿಲೆ ಇದ್ದರೂ ಸಹ ಅಷ್ಟೊಂದು ಸಿಹಿ ತಿನಿಸುಗಳನ್ನು ಸೇವಿಸುವಂತದ್ದೇನಿತ್ತು? ಇದು ತಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿಕೊಂಡು, ಮೆಡಿಕಲ್ ಕಾರಣಗಳಿಂದ ಬೈಲ್ ಪಡೆಯುವ ಹುನ್ನಾರ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಈ ಬಗ್ಗೆ ಮಾತನಾಡಿದ ದೆಹಲಿ ಸಚಿವ ಅತಿಶಿ, ಡಯಟ್ ಚಾರ್ಟ್ ಅನ್ನು ಅವರ ಮಧುಮೇಹಶಾಸ್ತ್ರಜ್ಞರು ಸಿದ್ಧಪಡಿಸಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸ್ವತಃ ದೆಹಲಿ ನ್ಯಾಯಾಲಯ ಟೈಪ್ 2 ಡಯಾಬಿಟಿಸ್ ರೋಗನಿರ್ಣಯದ ಹೊರತಾಗಿಯೂ ದಿನನಿತ್ಯದ ಸಕ್ಕರೆ ಅಂಶವಿರುವ ಮಾವಿನಹಣ್ಣು ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ವರದಿ ನೀಡಿರುವ ಇಡಿ ಅಧಿಕಾರಿಗಳ ದೂರಿನ ಅನ್ವಯ, ಕೋರ್ಟ್ ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೇಜ್ರಿವಾಲ್ರ ಡಯಟ್ ಚಾರ್ಟ್ ಸೇರಿದಂತೆ ಇತರೆ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ತಿಳಿಸಿತ್ತು. ಇಡಿ ಕೇಜ್ರಿವಾಲ್ ಆಹಾರದಲ್ಲಿ 'ಆಲೂ ಪೂರಿ', ಮಾವಿನಹಣ್ಣು ಮತ್ತು ಸಿಹಿತಿಂಡಿಗಳಂತಹ ಸಕ್ಕರೆ ಅಂಶವನ್ನು ಒಳಗೊಂಡಿರುವ ತಿನಿಸುಗಳೇ ಇವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಕೇಜ್ರಿವಾಲ್ ಅವರ ಸಕ್ಕರೆ ಮಟ್ಟದಲ್ಲಿ ಏರಿಳಿತದ ಕಾರಣ ವೀಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ಸಂಪರ್ಕಿಸಲು ನ್ಯಾಯಾಲಯದಿಂದ ಅನುಮತಿ ಕೋರಿದ್ದರು. ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಇಡಿಯನ್ನು ಕೇಳಿದೆ. ಏಪ್ರಿಲ್ 29ರಿಂದ ವಾರದ ಆರಂಭದಲ್ಲಿ ಈ ವಿಷಯದ ವಿಚಾರಣೆಯನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 24 ರೊಳಗೆ ಇಡಿ ತನ್ನ ಉತ್ತರವನ್ನು ಸಲ್ಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ,(ಏಜೆನ್ಸೀಸ್).