More

    ನ್ಯಾಯ ಪತ್ರ ದ ಮೂಲಕ ಜನರಿಗೆ ನ್ಯಾಯವನ್ನು ಒದಗಿಸಿ ಕೊಡಬೇಕೆಂಬ ಉದ್ದೇಶದಿಂದ ಪ್ರನಾಳಿಕೆಯಲ್ಲಿ ಇಟ್ಟುಕೊಳ್ಳಲಾಗಿದೆ – ಅಮಳ ರಾಮಚಂದ್ರ

    ಪುತ್ತೂರು: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮೊನ್ನೆ ಏಪ್ರಿಲ್ ತಿಂಗಳ 5ನೇ ತಾರೀಖಿನಂದು ಬಿಡುಗಡೆಯಾಗಿದೆ. ಈ ಪ್ರಣಾಳಿಕೆಗೆ “ನ್ಯಾಯ ಪತ್ರ” ಅನ್ನುವ ಹೆಸರನ್ನು ನೀಡಿದ್ದೇವೆ. ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಆಡಳಿತ ರೂಢ ಬಿಜೆಪಿ ದೇಶದ ಜನರಿಗೆ ಏನು ಅನ್ಯಾಯವನ್ನು ಮಾಡಿತ್ತೋ ಆ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ, ದೇಶದ ಎಲ್ಲ ಜನರಿಗೆ , ಬಡವ ಬಲ್ಲಿದನೆಂಬ ಭೇದವಿಲ್ಲದೆ, ಧರ್ಮಾತೀತವಾಗಿ ನ್ಯಾಯವನ್ನು ಒದಗಿಸಿ ಕೊಡಬೇಕೆಂಬ ಉದ್ದೇಶದಿಂದ ಈ ಪ್ರಣಾಳಿಕೆಯನ್ನು ತಯಾರಿಸಿದ್ದರಿಂದಾಗಿ ಈ ಪ್ರಣಾಳಿಕೆಗೆ “ನ್ಯಾಯ ಪತ್ರ” ಎಂದು ಹೆಸರು ನೀಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.

    ಪ್ರಧಾನ ಮಂತ್ರಿ ಮೋದಿ ನೇತೃತ್ವದ ಎನ್ ಡಿ ಎ ಆಡಳಿತಾವಧಿಯಲ್ಲಿ ದೇಶದ ಕೆಲವೇ ಕೆಲವು ಕೈಗಾರಿಗೋದ್ಯಮಿಗಳನ್ನು ಬಿಟ್ಟು ಉಳಿದ ಈ ದೇಶದ ಎಲ್ಲಾ ಜನಸಾಮಾನ್ಯರನ್ನು ನಿರ್ಲಕ್ಷಿಸಿ, ದೇಶದ ಜನ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ತೊಂದರೆಗಳನ್ನು ಅನುಭವಿಸಿದ್ದರಿಂದ ಆ ತೊಂದರೆಗಳನ್ನು ನಿವಾರಿಸುವ ದೃಷ್ಟಿಯಿಂದ ಈ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗಿದೆ. ಸರ್ವೇ ಜನಾಃ ಸುಖಿನೋ ಭವಂತು ಎಂಬ ಹಿಂದೂ ಧರ್ಮದ ಜಾತ್ಯತೀತ ಪರಿಕಲ್ಪನೆಯನ್ನು ತಿರುಚಿ, ಹಿಂದುತ್ವವನ್ನು ಒಂದು ಕೋಮುವಾದದ ಅಸ್ತ್ರವಾಗಿ ಬಳಸಿಕೊಂಡು, ಈ ದೇಶದ ವಿವಿಧ ಸಮುದಾಯಗಳ ಮಧ್ಯೆ ಬೆಂಕಿ ಹಚ್ಚಿ, ಅದರ ಕಾವಿನಿಂದ ಚುನಾವಣೆಗಳು ಗೆಲ್ಲುವ ಕೋಮು ಧ್ರುವೀಕರಣದ ವಿನಾಶಕಾರಿ ರಾಜಕಾರಣವನ್ನು ಬದಿಗಿ ಸರಿಸಿ, ಇಡೀ ದೇಶವನ್ನು ಒಂದು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಪುನರ್ನಿರ್ಮಿಸುವ ಉದ್ದೇಶದಿಂದ ಈ ಚುನಾವಣೆಯನ್ನು ಎದುರಿಸಲಾಗುತ್ತಿದೆ.

    ಈ ಸರಕಾದ ಅವಧಿಯಲ್ಲಿ ನಿರುದ್ಯೋಗ, ಬೆಲೆಯೇರಿಕೆ, ಹಣದುಬ್ಬರ, ಜನಾಂಗೀಯತೆ, ಕೋಮುಹಿಂಸಾಚಾರ, ಸಂಪತ್ತಿನ ಅಸಮಾನಿತ ಹಂಚಿಕೆ, ಭ್ರಷ್ಟಾಚಾರ, ಪ್ರಜಾಪ್ರಭುತ್ವದ ಕತ್ತು ಹಿಚುಕಿದ ಆಪರೇಶನ್ ಕಮಲ, ವಿಪಕ್ಷಗಳ ಖರೀದಿ, ಪತ್ರಿಕಾ ಸ್ವಾತಂತ್ರ್ಯದ ಹರಣ, ಸಂವಿಧಾನ ವಿರೋಧೀ ನಡೆ, ಚೈನಾ ಆಕ್ರಮಣ, ಕೈಗಾರಿಕೋಧ್ಯಮಿಗಳ ವಿಜ್ರಂಭಣೆ, ಸರಕಾರೀ ಸೊತ್ತುಗಳ ಮಾರಾಟ, ಧ್ವೇಷರಾಜಕಾರಣ ಮೊದಲಾದ ಜನ ವಿರೋಧೀ, ವಿನಾಶಕಾರೀ ರಾಜಕಾರಣ ಎಲ್ಲೆ ಮೀರಿದ್ದು, ಹಳಿತಪ್ಪಿದ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದಲೇ ಈ ಪ್ರಣಾಳಿಕೆನ್ನು ನೀಡಲಾಗಿದೆ. ಈ “ನ್ಯಾಯ ಪತ್ರ” ದಲ್ಲಿ ನ್ಯಾಯಸೌಧದ ಪಂಚಸ್ಥಂಭಗಳೆಂದು ಪರಿಗಣಿಸಲಾದ ಐದು ಗ್ಯಾರಂಟಿಗಳನ್ನು ಈ ಪ್ರಣಾಳಿಕೆಯಲ್ಲಿ ಕಟಿಬದ್ಧತೆಯಿಂದ ಸೇರಿಸಲಾಗಿದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿ ಯಶಸ್ವಿಯಾಗಿ ಜಾರಿಗೊಳಿಸಿದ 5 ಗ್ಯಾರೆಂಟಿಗಳ ಮಾದರಿಯಲ್ಲಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ಮತ್ತೆ 5 ಗ್ಯಾರಂಟಿಗಳನ್ನು ಪ್ರಕಟಿಸಿ, ಅವುಗಳ ಅನುಷ್ಠಾನಕ್ಕೆ ಬದ್ಧತೆಯನ್ನು ಪ್ರಕಟಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದರೆ, ಕರ್ನಾಟಕದ ಕಾಂಗ್ರೆಸ್ ಸರಕಾರದ ಮಾದರಿಯಲ್ಲಿ ಇಡೀ ದೇಶದಲ್ಲಿ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಅಧಿಕಾರಕ್ಕೆ ಕೇವಲ ಮೂರು ತಿಂಗಳ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಅತ್ಯಂತ ಸಮರ್ಪಕವಾಗಿ ಜಾರಿಗೊಳಿಸಿ, ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದಿದೆ. ಇದೇ ರೀತಿಯಲ್ಲಿ, ನುಡಿದಂತೆ ನಡೆಯುವ ತನ್ನ ಬದ್ಧತೆಯನ್ನು ಉಳಿಸಿಕೊಂಡು ಕೇಂದ್ರದಲ್ಲಿಯೂ ಅಧಿಕಾರಕ್ಕೇರಿದರೆ ಈ ಐದು ಗ್ಯಾರಂಟಿಗಳನ್ನು ನೂರಕ್ಕೆ ನೂರರಷ್ಟು ಖಚಿತವಾಗಿ ಜಾರಿಗೊಳಿಸುವ ಬದ್ಧತೆಯನ್ನು ನೀಡುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕಾಂಗ್ರೆಸ್ಸಿನ ಐದು ನ್ಯಾಯದ ಗ್ಯಾರೆಂಟೀ ಯೋಜನೆಗಳು :

    ನಾರೀ ನ್ಯಾಯ, ಯುವ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ, ಹಿಸ್ಸೇದಾರೀ ನ್ಯಾಯಗಳೆಂಬ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ನೀಡುತ್ತಿದೆ. ನಾರೀ ನ್ಯಾಯದ ಮೂಲಕ ದೇಶದ ಎಲ್ಲಾ ಸ್ತ್ರೀಯರಿಗೆ ನ್ಯಾಯವನ್ನು ನೀಡುವುದು, ಯುವ ನ್ಯಾಯದ ಮೂಲಕ ಯುವ ಜನಾಂಗಕ್ಕೆ ನ್ಯಾಯವನ್ನು ಒದಗಿಸುವುದು, ಕಿಸಾನ್ಯಾಯದ ಮೂಲಕ ದೇಶದ ರೈತರಿಗೆ ನ್ಯಾಯವನ್ನು ನೀಡುವುದು, ಶ್ರಮಿಕ್ ನ್ಯಾಯದ ಮೂಲಕ ದೇಶದ ಎಲ್ಲಾ ಕಾರ್ಮಿಕರಿಗೆ ನ್ಯಾಯವನ್ನು ನೀಡುವುದು ಮತ್ತು ಹಿಸ್ಸೇದಾರೀ ನ್ಯಾಯದ ಮೂಲಕ ದೇಶದ ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯವನ್ನು ಒದಗಿಸುವುದು ಈ ಐದು ಗ್ಯಾರಂಟಿ ಯೋಜನೆಗಳ ಉದ್ದೇಶವಾಗಿದೆ.

    ನಾರೀ ನ್ಯಾಯ:
    ಮಹಾಲಕ್ಷ್ಮಿ ಯೋಜನೆ: ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದ ಅವಧಿಯಲ್ಲಿ ಅಸಮರ್ಕಪಕವಾಗಿ ಜಾರಿಯಾದ ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ದಿನ ಬಳಕೆಯ ಎಲ್ಲಾ ವಸ್ತುಗಳಿಗೆ ಉಂಟಾದ ಬೆಲೆ ಏರಿಕೆಯಿಂದ ತತ್ತರಿಸಿದ ಸಮಸ್ತ ಕುಟುಂಬಗಳಿಗೆ ಸಾಂತ್ವನ ನೀಡುವ ಉದ್ದೇಶದಿಂದ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ಯೋಜನೆಯಲ್ಲಿ ದೇಶದ ಪ್ರತಿಯೊಂದು ಬಡ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿವರ್ಷ ಒಂದು ಲಕ್ಷ ರೂಪಾಯಿಗಳ ನಗದನ್ನು ನೇರ ನಗದು ವರ್ಗಾವಣೆಯ ಮೂಲಕ ಅವರ ಖಾತೆಗಳಿಗೆ ಉಚಿತವಾಗಿ ನೀಡಲಾಗುವುದು.


    ಮಹಿಳಾ ಮೀಸಲಾತಿ: ಇತ್ತೀಚಿಗೆ ಜಾರಿಗೆ ಬಂದಿರುವ ಮಹಿಳಾ ಮೀಸಲಾತಿ ಬಿಲ್‌ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಮಹಿಳಾ ಮೀಸಲಾತಿ ಬಿಲ್ಲಿಗೆ ನ್ಯಾಯವನ್ನು ಒದಗಿಸಲಾಗುವುದು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಹಿಳಾ ಮೀಸಲಾತಿ ಬಿಲ್ಲನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದಿಸಿಕೊಂಡಿದ್ದರೂ ಈ ಮಹಿಳಾ ಮೀಸಲಾತಿ 2029 ರ ನಂತರ ಜಾರಿಗೆ ಬರುವುದಾಗಿ ಹೇಳಿ ಮಹಿಳೆಯರ ಮೂಗಿಗೆ ತುಪ್ಪ ಒರೆಸುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿಯನ್ನು ಮುಂದಿನ ವರ್ಷದಿಂದಲೇ, ಅಂದರೆ 2025ರ ನಂತರ ನಡೆಯುವ ಎಲ್ಲಾ ಚುನಾವಣೆಗಳಲ್ಲಿಯೂ ಜಾರಿಗೆ ತರಲಾಗುವುದು.
    ಮೀಸಲಾತಿ: ಕೇಂದ್ರ ಸರಕಾರದ ಎಲ್ಲಾ ಸರಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇಕಡ 50ರ ಮೀಸಲಾತಿಯನ್ನು ನೀಡಿ ಮಹಿಳಾ ಸಬಲೀಕರಣವನ್ನು ಸಾಧಿಸಲಾಗುವುದು.

    ಯುವ ನ್ಯಾಯ:
    ರೈಟ್ ಟು ಎಪ್ರೆಂಟಿಸ್‌ಶಿಪ್ ಕಾಯಿದೆ ಜಾರಿ : ಭಾರತದ ಯುವಕರು ಇಂದು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರಕ ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಎನ್ನುವುದು ಈ ದೇಶದ ವಿದ್ಯಾವಂತ ಯುವಕರಿಗೆ ಮರೀಚಿಕೆಯಾಗಿದೆ . ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಪಡೆದು ಪದವಿಗಳನ್ನು ಪಡೆದ ನಂತರ ಯಾವುದೇ ಉದ್ಯೋಗ ಸಿಗದೆ ಬಳಲುತ್ತಿರುವ ನಿರುದ್ಯೋಗಿ ವಿದ್ಯಾವಂತರ ಸಂಖ್ಯೆ ಈ ದೇಶದಲ್ಲಿ ಅಪಾರವಾಗಿದೆ.
    ದೊಡ್ಡ ದೊಡ್ಡ ಡಿಗ್ರಿಗಳನ್ನು ಪಡೆದುಕೊಂಡು ಉದ್ಯೋಗದಲ್ಲಿರುವ ಯುವಕರ ಸ್ಥಿತಿಯನ್ನು ನೋಡಿದರೆ ಗಾಬರಿಯಾಗುತ್ತದೆ. ಇಂದು ಈ ದೇಶದಲ್ಲಿ 28.84% ಎಂಬಿಎ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ, ಇಂಜಿನಿಯರಿಂಗ್ ಪದವಿಧರ ನಿರುದ್ಯೋಗದ ಪ್ರಮಾಣ ಶೇಕಡಾ 35.33 ಆಗಿದೆ. ಎಂಸಿಎ ವಿದ್ಯಾರ್ಥಿಗಳಲ್ಲಿ ನಿರುದ್ಯೋಗದ ಪ್ರಮಾಣ 35.34 ರಷ್ಟಿದೆ. 46% ಬಿ ಫಾರಂ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ, 48.73% ಬಿಎಸ್ಸಿ ಪದವೀಧರರು, 51.88% ಬಿಕಾಂ ಪದವೀಧರರು 52.89% ಬಿಎ ಪದವೀಧರರು 60% ಐಟಿಐ ಪದವೀಧರು ಮತ್ತು 77.53% ಪಾಲಿಟೆಕ್ನಿಕ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಎನ್.ಎಸ್.ಎಸ್.ಒ. ನಡೆಸಿದ ಸರ್ವೆ ಹೇಳುತ್ತದೆ. 20ರಿಂದ 24 ವರ್ಷ ವಯಸ್ಸಿನ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಶೇಕಡಾ 44.49 ಆಗಿದೆ ಎಂದು ಸೆಂಟರ್ ಫೋರ್ ಮೋನಿಟರಿಂಗ್ ಇಂಡಿಯನ್ ಇಕಾನಮಿ ಎಂಬ ಸಂಸ್ಥೆ ನಡೆಸಿದ ಸರ್ವೆ ಹೇಳುತ್ತದೆ. ನೋಟ್ ಬ್ಯಾನ್, ಜಿ.ಎಸ್.ಟಿಯ ಜನವಿರೋಧಿ ಅನುಷ್ಠಾನ, ಕೋವಡ್‌ನ ಅಸಮರ್ಪಕ ನಿರ್ವಹಣೆಯ ಕಾರಣದಿಂದ ಉಲ್ಭಣವಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಯುವಕರಿಗೆ ಶಕ್ತಿ ನೀಡುವ ಉದ್ದೇಶದಿಂದ ರೈಟ್ ಇನ್ಫಾರ್ಮಶನ್, ರೈಟ್ ಟು ಎಜುಕೇಶನ್, ಫುಡ್ ಸೆಕ್ಯೂರಿಟಿ ಬಿಲ್ ಮತ್ತು ನರೇಗಾ ಮಾದರಿಯಲ್ಲಿ “ರೈಟು ಟು ಅಪ್ರೆಂಟಿಶಿಪ್” ಎಂಬ ಉದ್ಯೋಗ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿ ದೇಶದ ಎಲ್ಲಾ ನಿರುದ್ಯೋಗಿ ಪದವೀಧರರಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್‌ನ್ನು ಖಾತ್ರಿಗೊಳಿಸಲಾಗುವುದು. ನಿರುದ್ಯೋಗಿ ಪದವೀಧರರಿಗೆ ಒಂದು ವರ್ಷದ ಕಾಲ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳ ನಗದನ್ನು ನೀಡಲಾಗುವುದು.
    ಉದ್ಯೋಗ ಭರ್ತಿ: ಕೇಂದ್ರ ಸರಕಾರದಲ್ಲಿ ಖಾಲಿಯಾಗಿ ಬಿದ್ದಿರುವ ಸುಮಾರು 30 ಲಕ್ಷ ಉದ್ಯೋಗಗಳನ್ನು ಒಂದು ವರ್ಷದೊಳಗೆ ಬರ್ತಿ ಮಾಡಲಾಗುವುದು.

    ಅಗ್ನಿಪತ್ ಯೋಜನೆ ರದ್ದು: ಸೇನೆಯನ್ನು ಸೇರಿ ದೇಶ ಸೇವೆಯನ್ನು ಮಾಡಲು ಇಚ್ಚಿಸುವ ಯುವಕರನ್ನು ವಂಚಿಸುತ್ತಿರುವ ಅಗ್ನಿಪತ್ ಯೋಜನೆಯನ್ನು ರದ್ದುಗೊಳಿಸಿ ಸೇನೆ ನೇಮಕಾತಿಗಳನ್ನು ಈ ಹಿಂದಿನಂತೆಯೇ ಮಾಮೂಲಿ ಕ್ರಮದಲ್ಲಿ ನಡೆಸಲಾಗುವುದು. ಅಗ್ನಿಪತ್ ಯೋಜನೆಯಲ್ಲಿ ಆಯ್ಕೆಯಾದ ಸೈನಿಕರಿಗೆ ಕೇವಲ ನಾಲ್ಕು ವರ್ಷ ಮಾತ್ರ ಸೈನ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶವಿದ್ದು ನಾಲ್ಕು ವರ್ಷದ ನಂತರ ಇವರು ಸೇನೆಯಿಂದ ನಿವೃತ್ತರಾಗಿ, ಮತ್ತೆ ಪುನಃ ನಿರುದ್ಯೋಗಿಗಳಾಗುವ ಐಲು ಪದ್ಧತಿಯನ್ನು ಕೈ ಬಿಟ್ಟು ಏನೇಯನ್ನು ಯುವಕರನ್ನು ಸಶಕ್ತಿಕರಣ ಗೊಳಿಸಲಾಗುವುದು.


    ಕಿಸಾನ್ ನ್ಯಾಯ್:

    ದೇಶದ ಎಲ್ಲಾ ರೈತರ ಆದಾಯವನ್ನು ಎರಡು ಪಟ್ಟು ಮಾಡಲಾಗುವುದೆಂಬ ವಾಗ್ದಾನದೊಂದಿಗೆ ಅಧಿಕಾರ ಕೇಳಿದ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ತಮ್ಮ 10 ವರ್ಷದ ಆಡಳಿತದ ಅವಧಿಯಲ್ಲಿ ರೈತರನ್ನು ನಿರ್ಲಕ್ಷಿಸಿ, ಅವರನ್ನು ಖಾಲಿಸ್ತಾನಿಗಳೆಂದು ಕರೆದು ಸದೆಬಡಿಯುವ ಎಲ್ಲಾ ಕೆಲಸಗಳನ್ನು ಮಾಡಿದೆ. ಐದು ಕರಾಳ ರೈತ ಕಾನೂನುಗಳನ್ನು ಜಾರಿಗೆ ತಂದು, ಇದನ್ನು ಪ್ರತಿಭಡಿಸುತ್ತಿರುವ ರೈತರನ್ನು ತಮ್ಮ ವೈರಿಗಳಂತೆ ಕಾಣುತ್ತಿರುವ ಕೇಂದ್ರ ಸರಕಾರದ ನೀತಿಯನ್ನು ಕಿತ್ತುಹಾಕಿ ಸ್ವಾಮಿನಾಥನ್ ವರದಿಯಂತೆ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯ ಕಾನೂನು ಬದ್ಧ ಗ್ಯಾರಂಟಿಯನ್ನು ನೀಡಲಾಗುವುದು. ಪ್ರತಿ ವರ್ಷ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡಲಾಗುವುದು. ಜೊತೆಗೆ ಸ್ವಾಮಿನಾಥನ್ನು ವರದಿಯಂತೆ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಲಾಗುವುದು.

    ಶ್ರಮಿಕ್ ನ್ಯಾಯ್:

    ಇಂದು ಈ ದೇಶವನ್ನು ಕಟ್ಟುತ್ತಿರುವ ಎಲ್ಲಾ ಕೂಲಿ ಕಾರ್ಮಿಕರ ಬದುಕನ್ನು ಸದೃಢಗೊಳಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದಿನಗೂಲಿಯನ್ನು 330 ರೂಪಾಯಿ ಗಳಿಂದ 400 ರೂಪಾಯಿಗೆ ಏರಿಸಲಾಗುವುದು.

    ಹಿಸ್ಸೇದಾರಿ ನ್ಯಾಯ್ (ಪಾಲುದಾರಿಕೆಯ ನ್ಯಾಯ) :
    ಒಂದು ಪ್ರಜಾಪ್ರಭುತ್ವ ದೇಶದಲ್ಲಿ ಸರ್ವರಿಗೂ ಸಮಪಾಲು ಸಮ ಬಾಳು ಒದಗಿಸುವುದು ಯಾವುದೇ ಸರಕಾರದ ಜವಾಬ್ದಾರಿಯಾಗುತ್ತದೆ. ಆದರೆ ಈ ದೇಶದಲ್ಲಿ ಶತಮಾನಗಳಿಂದ ಬೆಳೆದು ಬಂದ ವರ್ಣ ಪದ್ಧತಿ ಮತ್ತು ಅದರ ಮೂಲಕ ಸ್ಥಾಪನೆಯಾದ ಜಾತಿ ಪದ್ಧತಿ ಈ ದೇಶದಲ್ಲಿ ಅಮಾನವೀಯವಾದ ಮತ್ತು ಅವಮಾನೀಯವಾದಂತಹ ಶೋಷಣೆಗೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಬಲಿತರು ದಲಿತರನ್ನು ಶೋಷಿಸುವ ವ್ಯವಸ್ಥೆ ರೂಪಗೊಂಡಿದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದಲೇ ಸ್ವಾತಂತ್ರ್ಯಾ ನಂತರ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾಕ್ಟರ್ ಬೀಮರಾವ್ ರಾಮ್‌ಜಿ ಅಂಬೇಡ್ಕರ್‌ರವರು ರೂಪಿಸಿದ ಸಂವಿಧಾನವನ್ನು ಜಾರಿಗೆ ತಂದು ಸಾಮಾಜಿಕ ನ್ಯಾಯವನ್ನು ಪ್ರತಿಷ್ಠಾಪಿಸುವ ಪ್ರಯತ್ನವನ್ನು ನಡೆಸಿತ್ತು. ಈ ಉದ್ದೇಶಕ್ಕಾಗಿಯೇ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮತ್ತು ರಾಜಕೀಯದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿ ಸರ್ವ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಡಿ ಇಟ್ಟಿತು. ಸ್ವಾತಂತ್ರ್ಯ ನಂತರ ಕಳೆದ ಈ 75 ವರ್ಷಗಳಲ್ಲಿ ಬಹಳಷ್ಟು ಸಾಧಿಸಿದರೂ ಶೋಷಿತರು ಇನ್ನೂ ಶೋಷಣೆಗೆ ಒಳಗಾಗುತ್ತದೆ ಇದ್ದಾರೆ. ಆದ್ದರಿಂದ ಇಡೀ ದೇಶದಲ್ಲಿ ಜಾತಿಗಣತಿಯನ್ನು ನಡೆಸಿ, ಜಾತಿ ಪ್ರಮಾಣಕ್ಕನುಗುಣವಾಗಿ ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಆರ್ಥಿಕ ಸಂಪತ್ತನ್ನು ಸಮಾನವಾಗಿ ಹಂಚುವ ಗ್ಯಾರಂಟಿಯನ್ನು ಕಾಂಗ್ರೆಸ್ಸಿನ ಪ್ರಣಾಳಿಕೆ ನೀಡುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಇರುವ 50 ಶೇಕಡಾ ನಿರ್ಬಂಧವನ್ನು ಸಂವಿಧಾನದ ತಿದ್ದುಪಡಿಯ ಮೂಲಕ ಬದಲಾಯಿಸಿ ಶೋಷಿತರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದರಿಗೆ ನೀಡಲಾಗುತ್ತಿರುವ ಹತ್ತು ಶೇಕಡ ಮೀಸಲಾತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಇತರ ಶೋಷಿತ ಸಮಾಜಕ್ಕೆ ಇರುವ ಮೀಸಲಾತಿಯ ಮಿತಿಯನ್ನು ಏರಿಸಲಾಗುವುದು. ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಕೇಂದ್ರ ಸರಕಾರದ ಎಲ್ಲಾ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮನೆ, ವ್ಯವಹಾರ ಮತ್ತು ಖರೀದಿಗಾಗಿ ನೀಡುವ ಸಾಂಸ್ಥಿಕ ಸಾಲದ ಹೆಚ್ಚಳವನ್ನು ಮಾಡಲಾಗುವುದು. ಹೆಚ್ಚುವರಿ ಸರಕಾರಿ ಭೂಮಿಯನ್ನು ಬಡವರಿಗೆ ಹಂಚಲು ಮೇಲ್ವಿಚಾರಣಾ ಸಮಿತಿಯನ್ನು ಜಾರಿಗೆ ತಂದು ಇನ್ನೂ ಭೂರಹಿತರಾಗಿ ಉಳಿದ ಬಡವರಿಗೆ ಭೂಮಿಯನ್ನು ಹಂಚಲಾಗುವುದು. ಇವೇ ಕಾಂಗ್ರೆಸ್ಸಿನ ನ್ಯಾಯ ಪತ್ರದಲ್ಲಿರುವ ಐದು “ಪಂಚ ಗ್ಯಾರಂಟಿಗಳು”. ದೇಶದ ಜನ ಈ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಬೆಂಬಲಿಸಿ, ಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಅವಕಾಶವನ್ನು ನೀಡಬೇಕೆಂದು ತಮ್ಮ ಮೂಲಕ ವಿನಂತಿ ಮಾಡುತ್ತಿದ್ದೇವೆ.

    ಮುಖಂಡರಾದ ರೋಷನ್ ರೈ ಬನ್ನೂರು, ಸಿದ್ದಿಕ್ ಸುಲ್ತಾನ್, ವಾಲ್ಟರ್ ಸ್ವಿಕ್ವೇರಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts