ಕಾಶಿ ವಿಶ್ವನಾಥ ದೇಗುಲದಲ್ಲಿ ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಲಾರೆನ್ ಪೊವೆಲ್; ಶಿವಲಿಂಗ ಸ್ಪರ್ಶಿಸಲು ಆಕೆಗೆ ಅನುಮತಿ ಇಲ್ಲ.. ಕಾರಣ ಹೀಗಿದೆ |Kashi Vishwanath Temple

Untitled design - 2025-01-13T163126.515
Published on

ವಾರಣಾಸಿ: ಆಪಲ್‌ನ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಆಧ್ಯಾತ್ಮಿಕ ಶಾಂತಿಯನ್ನು ಹುಡುಕುವ ಸಲುವಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಈ ಅನುಕ್ರಮದಲ್ಲಿ ಅವರು ತಮ್ಮ ಗುರು ನಿರಂಜನಿ ಅಖಾರದ ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್ ಅವರೊಂದಿಗೆ ವಿಶ್ವದ ಅತ್ಯಂತ ಹಳೆಯ ನಗರ ಕಾಶಿಗೆ(Kashi Vishwanath Temple) ಭೇಟಿ ನೀಡಿದ್ದರು.

ದೇಗುಲಕ್ಕೆ ಭೇಟಿ ನೀಡಿದ್ದ ಅವರಿಗೆ ಕಾಶಿ ವಿಶ್ವನಾಥದಲ್ಲಿರುವ ಶಿವಲಿಂಗವನ್ನು ಮುಟ್ಟಲು ಅವಕಾಶ ನೀಡಲಿಲ್ಲ. ಅಷ್ಟಕ್ಕೂ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಲಾರೆನ್‌ಗೆ ಹೀಗೆ ಏಕೆ ಮಾಡಲಾಯಿತು? ಅದಕ್ಕೆ ಕಾರಣ ಏನಿರಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಈ ರೀತಿ ಮಾಡಲು ಏನು ಕಾರಣ ಎಂಬುದನ್ನು ಕೈಲಾಶಾನಂದ ಗಿರಿ ಮಹಾರಾಜ್ ಅವರು ತಿಳಿಸಿದ್ದಾರೆ.

ಸ್ಟೀವ್ ಜಾಬ್ಸ್ ಅವರ ಪತ್ನಿ ನಮ್ಮೊಂದಿಗೆ ಕಾಶಿ ವಿಶ್ವನಾಥನಲ್ಲಿ ಮಹಾದೇವನ ದರ್ಶನ ಪಡೆದಿದ್ದಾರೆ. ಆದರೆ ಅವರಿಗೆ ಶಿವಲಿಂಗ ಸ್ಪರ್ಶಿಸಲು ಅನುಮತಿಸಿಲ್ಲ. ಏಕೆಂದರೆ ನಿಯಮಗಳ ಪ್ರಕಾರ, ಭಾರತೀಯ ಸಂಪ್ರದಾಯದ ಪ್ರಕಾರ ಶ್ರೀಕಾಶಿ ವಿಶ್ವನಾಥನ ಗರ್ಭಗುಡಿಯಲ್ಲಿ ಅನ್ಯಧರ್ಮೀಯರ ಪ್ರವೇಶ ನಿಷಿದ್ಧವಿದೆ ಮತ್ತು ಹಿಂದೂಯೇತರ ಧರ್ಮದ ಜನರು ಶಿವಲಿಂಗವನ್ನು ಸ್ಪರ್ಶಿಸಲು ಅನುಮತಿಸುವುದಿಲ್ಲ. ಅವರು ಕೂಡ ದೇವಾಲಯದ ಸಂಪ್ರದಾಯಗಳನ್ನು ಅನುಸರಿಸಿದ್ದಾರೆ. ಗರ್ಭಗುಡಿಯ ಹೊರಗಿನಿಂದ ಮಹಾದೇವನ ದರ್ಶನ ಪಡೆದು ಪೂಜೆ, ನಮನ ಸಲ್ಲಿಸಿದರು ಎಂದು ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್ ತಿಳಿಸಿದರು.

ಸನಾತನ ಧರ್ಮದ ನಿಯಮಗಳನ್ನು ಪಾಲಿಸುವುದು ಅವರ ನೈತಿಕ ಕರ್ತವ್ಯವಾಗಿದೆ. ಅದನ್ನು ಪೊವೆಲ್ ಪಾಲಿಸಿದ್ದಾರೆ ಎಂದು ಹೇಳಿದರು. ಲಾರೆನ್ ಪೊವೆಲ್ ಜಾಬ್ಸ್ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಕುಂಭದಲ್ಲಿ ಇದ್ದು ಗಂಗಾದಲ್ಲಿ ಸ್ನಾನ ಮಾಡಲು ಯೋಜಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು. ಅಲ್ಲದೆ ಲಾರೆನ್​​ ಅವರು ತಮ್ಮ ಹೆಸರನ್ನು ಕಮಲಾ ಎಂದು ಬದಲಾಯಿಸಿಕೊಂಡರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net