ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ವಿದೇಶಾಂಗ ಸಚಿವಾಲಯ ಸೋಮವಾರ(ಜನವರಿ 13) ಬಾಂಗ್ಲಾದೇಶ ರಾಯಭಾರಿಯನ್ನು ಕರೆಸಿದೆ(Envoy Summoned ) ಎಂದು ಎಎನ್‌ಐ ವರದಿ ಮಾಡಿದೆ.
ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯವು ಢಾಕಾದಲ್ಲಿ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನು ಕರೆಸಿದ ಒಂದು ದಿನದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ನೂರುಲ್ ಇಸ್ಲಾಂ ಅವರನ್ನು ಕರೆಸಿದೆ. ಭಾರತ-ಬಾಂಗ್ಲಾದೇಶ ಗಡಿಗೆ ಬೇಲಿ ಹಾಕುವ ವಿಷಯದ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ ಸಹಕಾರವನ್ನು ಪಡೆಯದ ಹಿನ್ನೆಲೆಯಲ್ಲಿ ಭಾರತವು ನವದೆಹಲಿಯಲ್ಲಿ ಬಾಂಗ್ಲಾದೇಶದ ಉನ್ನತ ರಾಜತಾಂತ್ರಿಕರನ್ನು ಕರೆಸಿದೆ ಎಂದು ಹೇಳಲಾಗುತ್ತಿದೆ.
ಉಭಯ ದೇಶಗಳ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆ ನಿನ್ನೆ ಬಾಂಗ್ಲಾದೇಶವು ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರೊಂದಿಗೆ ಸುಮಾರು 30 ನಿಮಿಷಗಳ ಕಾಲ ಸಭೆ ನಡೆಸಿತ್ತು. ಈ ಸಭೆಯಲ್ಲಿ ಬಾಂಗ್ಲಾದೇಶ ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್ ಜಾಶಿಮ್ ಉದ್ದೀನ್ ಅವರು ಗಡಿ ಬೇಲಿ ಕುರಿತು ತಮ್ಮ ಕಳವಳವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು ಎನ್ನಲಾಗಿದೆ.
ಮಾತುಕತೆ ಬಳಿಕ ಪ್ರಣಯ್ ವರ್ಮಾ ಅವರು ಗಡಿಯಲ್ಲಿ ಭದ್ರತೆಗಾಗಿ ಬೇಲಿ ಹಾಕುವ ಬಗ್ಗೆ ಢಾಕಾ ಮತ್ತು ನವದೆಹಲಿ ನಡುವೆ ಒಪ್ಪಂದವಿದೆ ಎಂದು ಹೇಳಿದ್ದರು. ‘ನಮ್ಮ ಎರಡು ಗಡಿ ಭದ್ರತಾ ಪಡೆಗಳಾದ ಬಿಎಸ್‌ಎಫ್ ಮತ್ತು ಬಿಜಿಬಿ (ಗಡಿ ಭದ್ರತಾ ಪಡೆ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ) ಈ ನಿಟ್ಟಿನಲ್ಲಿ ಸಂಪರ್ಕದಲ್ಲಿವೆ. ಈ ತಿಳುವಳಿಕೆಯನ್ನು ಕಾರ್ಯಗತಗೊಳಿಸಲಾಗುವುದು ಮತ್ತು ಗಡಿ ಅಪರಾಧಗಳನ್ನು ಎದುರಿಸಲು ಸಹಯೋಗದ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು. ವಾಸ್ತವವಾಗಿ ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿ ಬಾಂಗ್ಲಾದೇಶದ ಗಡಿಯಲ್ಲಿ ಐದು ಸ್ಥಳಗಳಲ್ಲಿ ಬೇಲಿ ನಿರ್ಮಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಬಾಂಗ್ಲಾದೇಶ ಆರೋಪಿಸಿದೆ.(ಏಜೆನ್ಸೀಸ್)