ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳ(Mahakumbh 2025) ಆರಂಭಗೊಂಡಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸ್ಥಳವಾದ ಸಂಗಮ್‌ನಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಮೊದಲ ಪವಿತ್ರ ಸ್ನಾನ ಮಾಡಿದರು.
12 ವರ್ಷಗಳ ನಂತರ ನಡೆದ ಕಾರ್ಯಕ್ರಮವನ್ನುಸುಮಾರು 4,000 ಹೆಕ್ಟೇರ್‌ಗಳಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭ ಫೆಬ್ರವರಿ 26ರವರೆಗೆ ಮುಂದುವರಿಯುತ್ತದೆ. ಇದು ಭಾರತದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಭಾರಿ ಉತ್ತೇಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
2025ರ ಈ ಮಹಾಕುಂಭದಿಂದ ಉತ್ತರ ಪ್ರದೇಶವು 2 ಲಕ್ಷ ಕೋಟಿ ರೂಪಾಯಿಗಳವರೆಗೆ ಆರ್ಥಿಕ ಬೆಳವಣಿಗೆಯನ್ನು ಪಡೆಯುವ ನಿರೀಕ್ಷೆಯಿದೆ. ಅಂದಾಜಿನ ಪ್ರಕಾರ 40 ಕೋಟಿ ಭಕ್ತರು ಸರಾಸರಿ 5000 ರೂಪಾಯಿ ಖರ್ಚು ಮಾಡಿದರೆ ಈ ಕಾರ್ಯಕ್ರಮವು 2 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಗಳಿಸಬಹುದು. ಉದ್ಯಮದ ಅಂದಾಜಿನ ಪ್ರಕಾರ, ಈ ಮಹಾಕುಂಭದಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ ವೆಚ್ಚವು 10,000 ರೂಪಾಯಿಗಳಷ್ಟು ಹೆಚ್ಚಾಗಬಹುದು ಮತ್ತು ಒಟ್ಟು ಆರ್ಥಿಕ ಪರಿಣಾಮವು 4 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಬಹುದು ಎಂದು ಹೇಳಲಾಗಿದೆ. ಇದು ನಾಮಮಾತ್ರ ಮತ್ತು ನೈಜ ಜಿಡಿಪಿ ಎರಡನ್ನೂ ಶೇಕಡಾ 1ಕ್ಕಿಂತ ಹೆಚ್ಚು ಹೆಚ್ಚಿಸುವ ನಿರೀಕ್ಷೆಯಿದೆ.
ಪ್ಯಾಕ್ ಮಾಡಲಾದ ಆಹಾರಗಳು, ನೀರು, ಬಿಸ್ಕತ್ತು, ಜ್ಯೂಸ್ ಮತ್ತು ಊಟ ಸೇರಿದಂತೆ ಆಹಾರ ಮತ್ತು ಪಾನೀಯ ವಲಯದಿಂದ ಒಟ್ಟು ವ್ಯಾಪಾರವು 20,000 ಕೋಟಿ ರೂಪಾಯಿಗಳಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.
2019ರಲ್ಲಿ ಪ್ರಯಾಗರಾಜ್‌ನ ಅರ್ಧ ಕುಂಭಮೇಳ ರಾಜ್ಯದ ಆರ್ಥಿಕತೆಗೆ 1.2 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 2019ರಲ್ಲಿ ಸುಮಾರು 24 ಕೋಟಿ ಯಾತ್ರಿಕರು ಅರ್ಧ ಕುಂಭ ಮೇಳಕ್ಕೆ ಬಂದಿದ್ದರು. ಈ ವರ್ಷ 40 ಕೋಟಿ ಭಕ್ತರು ಬರುವ ನಿರೀಕ್ಷೆಯಿದ್ದು, ಮಹಾಕುಂಭದಿಂದ 2 ಲಕ್ಷ ಕೋಟಿ ರೂ.ವರೆಗೆ ಆರ್ಥಿಕ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಅವರು ಇತ್ತೀಚೆಗೆ ಹೇಳಿದ್ದರು.
ಇದು ಬಹಳ ವಿಶೇಷವಾದ ದಿನ
ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟ್ಯಂತರ ಜನರಿಗೆ ಮಹಾಕುಂಭದ ಪ್ರಾರಂಭವನ್ನು ಅತ್ಯಂತ ವಿಶೇಷ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಪೌಷ್ ಪೂರ್ಣಿಮೆಯಂದು ಪವಿತ್ರ ಸ್ನಾನದೊಂದಿಗೆ ಮಹಾಕುಂಭವು ಇಂದಿನಿಂದ ಪುಣ್ಯಭೂಮಿಯಾದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿದೆ. ನಮ್ಮ ನಂಬಿಕೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಈ ಸಮಯದಲ್ಲಿ ನಾನು ಎಲ್ಲಾ ಭಕ್ತರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಆಧ್ಯಾತ್ಮಿಕ ಸಂಪ್ರದಾಯದ ಈ ಮಹಾಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)