More

    ಶಿಕ್ಷಕರ ವರ್ಗಾವಣೆ ಮುಂದುವರಿಸಲು ಅನುಮತಿ; ಸದ್ಯದಲ್ಲೇ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ನೂತನ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಕಳೆದ ವರ್ಷ ಹೆಚ್ಚುವರಿ ಶಿಕ್ಷಕರ ಮಾಹಿತಿ ಸಲ್ಲಿಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷ ಹಾಗೂ ಚುನಾವಣಾ ನೀತಿ ಸಂಹಿತೆ ಸೇರಿ ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆಯನ್ನು ಮುಂದುವರಿಸಲು ಅನುಮತಿ ನೀಡಿದೆ.

    ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಯು ಇಲಾಖೆ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಹಾಗೂ ಸಾಮಾನ್ಯ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಪ್ರಕ್ರಿಯೆಯನ್ನು ಮುಂದುವರಿಸಲು ತಿಳಿಸಿದ್ದಾರೆ. ಇಂದೆರಡು ದಿನಗಳಲ್ಲಿ ವಿಸತವಾದ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಪೊಲೀಸರು ಸಾರ್ವಜನಿಕರ ಜತೆ ಕಡೇಪಕ್ಷ ಸಭ್ಯತೆಯಿಂದ ವರ್ತಿಸಿ: ಪೊಲೀಸರಿಗೆ ಎಡಿಜಿಪಿ ಪರೋಕ್ಷ ಎಚ್ಚರಿಕೆ

    2022-23ನೇ ಸಾಲಿನಲ್ಲಿ ವರ್ಗಾವಣೆ ಕಾಯ್ದೆ/ನಿಯಮಗಳಿಗೆ ತಿದ್ದುಪಡಿ ತಂದು ಶಿಕ್ಷಕ ಸ್ನೇಹಿ ವಗಾವಣೆಗಳನ್ನು ಕೈಗೊಳ್ಳಲು ತೀರ್ಮಾನಿಸಿ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ವರ್ಗಾವಣೆಯ ಮೊದಲನೇ ಹಂತವಾದ ಹೆಚ್ಚುವರಿ ಶಿಕ್ಷಕರ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಕೆಲವು ತಾಂತ್ರಿಕ ನ್ಯೂನ್ಯತೆಗಳು ಕಂಡುಬಂದಿದ್ದರಿಂದ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಅನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದೀಗ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.

    75 ಸಾವಿರ ಅರ್ಜಿ ಸಲ್ಲಿಕೆ

    ವರ್ಗಾವಣೆ ಬಯಸಿ 75 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದು, ಕನಿಷ್ಠ 30 ಸಾವಿರಕ್ಕೂ ಹೆಚ್ಚಿನ ಶಿಕ್ಷಕರು ವರ್ಗಾವಣೆಯ ಲಾಭ ಪಡೆಯಲಿದ್ದಾರೆ. ಆದ್ದರಿಂದ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಹಾಗೂ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಳನ್ನು ಮುಂದುವರಿಸುವಂತೆ ಸೂಚಿಸಿದ್ದಾರೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್. ಹೊಸಮಠ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ: ಕಂದಾಯ ಸಚಿವರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ; ಇಲ್ಲಿದೆ ವಿವರ..

    ಡಿಸೆಂಬರ್‌ನಲ್ಲಿ ಹೊರಡಿಸಿದ್ದ ಅಧಿಸೂಚನೆ

    2022ರ ಡಿಸೆಂಬರ್ 22ರಂದು ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಅಧಿಸೂಚನೆ ಹೊರಡಿಸಿತ್ತು. 2023ರ ಫೆ. 28ಕ್ಕೆ ಪ್ರಕ್ರಿಯೆ ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿತ್ತು. ಆದರೆ, ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ದಾಖಲೆ ಸಲ್ಲಿಕೆಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದವು. ಇದರಿಂದ ಮಾರ್ಚ್ 10ರ ವರೆಗೆ ಅವಕಾಶ ಕಲ್ಪಿಸಿತ್ತು. ಬಳಿಕ ಎರಡನೇ ಬಾರಿ ಮುಂದೂಡಲಾಗಿತ್ತು. ಕೊನೆಗೆ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.

    ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ಒತ್ತಾಯಿಸಲಾಗಿತ್ತು. ಅದರಂತೆ ಅನುಮತಿ ನೀಡಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
    – ಚಂದ್ರಶೇಖರ್ ನುಗ್ಗಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts