ಪೊಲೀಸರು ಸಾರ್ವಜನಿಕರ ಜತೆ ಕಡೇಪಕ್ಷ ಸಭ್ಯತೆಯಿಂದ ವರ್ತಿಸಿ: ಪೊಲೀಸರಿಗೆ ಎಡಿಜಿಪಿ ಪರೋಕ್ಷ ಎಚ್ಚರಿಕೆ

Alok Kumar
Published on

ಬೆಂಗಳೂರು: ಪೊಲೀಸರು ಸಾರ್ವಜನಿಕರ ಬಳಿ ದುರ್ವರ್ತನೆ ತೋರುತ್ತಾರೆ ಎಂಬುದು ಸಮಾಜದಲ್ಲಿ ಆಗಾಗ ಕೇಳಿ ಬರುವಂಥ ಆರೋಪ. ಅದೇ ಕಾರಣಕ್ಕೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾಗಿದ್ದೂ ಇದೆ. ಹೀಗೆ ಪೊಲೀಸರು ದುರ್ವರ್ತನೆ ತೋರಿದ ಕುರಿತು ಮತ್ತೊಂದು ಆರೋಪ ಕೇಳಿಬಂದಿದೆ.

ಈ ಪ್ರಕರಣ ಕುರಿತ ಮಾಹಿತಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್​ಕುಮಾರ್​ ಅವರ ಗಮನಕ್ಕೂ ತಲುಪಿದ್ದು, ಇದೇ ವಿಚಾರವಾಗಿ ಅವರು ಪೊಲೀಸರಿಗೆ ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಂದ ದೂರಿನ ಮೇರೆಗೆ ಅವರು ಈ ಸಂದೇಶವನ್ನು ರವಾನಿಸಿದ್ದಾರೆ.

'ಮೇ 30ರ ಬೆಳಗ್ಗೆ 11:45ರ ಸುಮಾರಿಗೆ ಮಂಡ್ಯ ಸರ್ಕಾರಿ ಆಸ್ಪತ್ರೆಯ ಮುಂದೆ ಹೋಗುತ್ತಿದ್ದಾಗ ಆಟೋಚಾಲಕರೊಬ್ಬರಿಗೆ ಪೊಲೀಸರೊಬ್ಬರು ಸಾರ್ವಜನಿಕವಾಗಿ ಹೊಡೆಯುತ್ತಿದ್ದರು. ಏನೇ ತಪ್ಪಾಗಿದ್ದರೂ ಈ ರೀತಿಯಲ್ಲಿ ಹೊಡೆಯಬಹುದಾ? ಪೋಲೀಸರ ಕೆಲಸ ಕೇಸ್ ಮಾಡಿ ಶಿಕ್ಷೆ ಕೊಡಿಸೋದಾ ಇಲ್ಲ ಅವರೇ ಶಿಕ್ಷೆ ಕೊಡೋದಾ?' ಎಂಬುದಾಗಿ ವ್ಯಕ್ತಿಯೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ಮಾತ್ರವಲ್ಲ ಸಂಬಂಧಿತ ಪ್ರಕರಣದ ವಿಡಿಯೋ ಕೂಡ ಆ ಟ್ವೀಟ್ ಜತೆಗೆ ಹಂಚಿಕೊಂಡಿದ್ದರು. ಅಲ್ಲದೆ ಈ ಟ್ವೀಟ್​ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನೂ ಮೆನ್ಷನ್​ ಮಾಡಿದ್ದರು.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಅಲೋಕ್​ ಕುಮಾರ್​, ಸಂಬಂಧಿತ ಕಾನ್​ಸ್ಟೆಬಲ್​ನನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ಕ್ರಮವನ್ನು ಪ್ರಾರಂಭಿಸಲಾಗಿದೆ. ಅಂತಹ ಯಾವುದೇ ಅನುಚಿತ ನಡವಳಿಕೆಯನ್ನು ಕಠಿಣವಾಗಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ. ಮಾತ್ರವಲ್ಲ, ಪೊಲೀಸರಿಂದ ಸಾರ್ವಜನಿಕರು ನಿರೀಕ್ಷಿಸುವ ಕನಿಷ್ಠ ವಿಷಯವೆಂದರೆ ಸಭ್ಯತೆ ಎನ್ನುವ ಮೂಲಕ ಅವರು, ಪೊಲೀಸರು ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net