ಬೊಕ್ಕಸಕ್ಕೆ ವಿದ್ಯುತ್ ಶಾಕ್: ದುಬಾರಿ ಕಲ್ಲಿದ್ದಲು, ಕರೆಂಟ್ ಖರೀದಿ ರಾಜ್ಯಕ್ಕೆ ಸವಾಲು

Power Cut
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು 
ಗ್ಯಾರಂಟಿ ಯೋಜನೆಗಳ ಜಾರಿ ವೆಚ್ಚವನ್ನು ಸರಿದೂಗಿಸಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರಕ್ಕೆ ಈಗ ವಿದ್ಯುತ್ ಕೊರತೆ ಶಾಕ್ ನೀಡಿದೆ. ಮಳೆ ಕೈ ಕೊಟ್ಟಿದ್ದರಿಂದ ವಿದ್ಯುತ್ ಉತ್ಪಾದನೆ ಕುಸಿದಿದ್ದರೆ, ಮತ್ತೊಂದೆಡೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್ ಖರೀದಿಸುವ ಸವಾಲು ಎದುರಾಗಿದೆ. ಕ್ರೋಡೀಕೃತ ಆರ್ಥಿಕ ಸಂಪನ್ಮೂಲ ಬಳಕೆ ಲೆಕ್ಕಾಚಾರ ಮರು ಅಂದಾಜಿಸುವ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ.

ಸದ್ಯ ಬೆಂಗಳೂರು ಸೇರಿ ಮಹಾನಗರಗಳಲ್ಲಿ ವಿದ್ಯುತ್ ಪೂರೈಕೆ ಚೆನ್ನಾಗಿಟ್ಟುಕೊಂಡು, ವಿದ್ಯುತ್ ಬವಣೆ ಬಿಸಿ ಇಲ್ಲಿನ ಜನರಿಗೆ ತಟ್ಟದಂತೆ ಸರ್ಕಾರ ನೋಡಿಕೊಂಡಿದೆ. ಆದರೆ ನೀರಾವರಿ ಪಂಪ್​ಸೆಟ್ ಹೊಂದಿರುವ ರೈತರು, ಗ್ರಾಮೀಣ ಭಾಗದಿಂದ ಜನಾಕ್ರೋಶ ಭುಗಿಲೆದ್ದ ನಂತರ ಸಿಎಂ ಸಿದ್ದರಾಮಯ್ಯ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ನಂತರ ನಗರ-ಪಟ್ಟಣಗಳಲ್ಲಿ ಕಡಿತದ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದ್ದು, ನೀರಾವರಿ ಪಂಪ್​ಸೆಟ್​ಗಳಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿದೆ.

ಜಲ ಮೂಲ, ಶಾಖೋತ್ಪನ್ನ ಮೂಲದಿಂದ ವಿದ್ಯುತ್ ಲಭ್ಯತೆ ಪ್ರತಿದಿನ 35 ದಶಲಕ್ಷ ಯೂನಿಟ್ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ವಿನಿಮಯ ಮತ್ತು ಖರೀದಿ ಮೂಲಕ ಸರಾಸರಿ 28 ರಿಂದ 30 ದಶಲಕ್ಷ ಯೂನಿಟ್ ಪಡೆದು, ಉದ್ಯಮ-ವಹಿವಾಟಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ 1,500 ಮೆ.ವಾ. ವಿದ್ಯುತ್ ಅಲ್ಪಾವಧಿಗೆ ಖರೀದಿಸಿ, 10 ಲಕ್ಷ ಟನ್ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡು ಶಾಖೋತ್ಪನ್ನ ಸ್ಥಾವರಗಳಲ್ಲಿ ಉತ್ಪಾದನೆ ಹಚ್ಚಿಸಲು ಇಲಾಖೆ ಚಿಂತನೆ ನಡೆಸಿದೆ.

ಆದರೆ ಇದಕ್ಕೆ ಅಪಾರ ಪ್ರಮಾಣದಲ್ಲಿ ವೆಚ್ಚ ತಗಲುತ್ತದೆ. ಇದಕ್ಕೆ ಸಿಎಂ ಒಪ್ಪಿಗೆ ಅಗತ್ಯವಾಗಿದೆ. ನಾಲ್ಕು ಗ್ಯಾರಂಟಿಗಳಿಗೆ ಮಾಸಿಕ ವೆಚ್ಚ ಭರಿಸಲು ಸರ್ಕಾರ ಏದುಸಿರು ಬಿಡುತ್ತಿದೆ. ದುಬಾರಿ ದರದ ವಿದ್ಯುತ್ ಹಾಗೂ ವಿದೇಶಿ ಕಲ್ಲಿದ್ದಲು ಖರೀದಿ ಹೆಚ್ಚುವರಿ ಭಾರ ಹೊರಿಸಲಿದೆ ಎನ್ನುವ ಕಟುಸತ್ಯ.

ಹೊಂದಾಣಿಕೆ ಕಸರತ್ತು: ಸದ್ಯಕ್ಕೆ ನಗರ-ಪಟ್ಟಣಗಳಲ್ಲಿ 2ರಿಂದ 3 ತಾಸು ವಿದ್ಯುತ್ ಕಡಿತವಾಗುತ್ತಿದೆ. ಹಳ್ಳಿಗಳಲ್ಲಿ ಬೆಳಗ್ಗೆ 6ರಿಂದ 10, ಸಂಜೆ 6 ರಿಂದ 10ರವರೆಗೆ ಮೂರು ಫೇಸ್ ವಿದ್ಯುತ್ ಒದಗಿಸಲಾಗುತ್ತದೆ. ರಾತ್ರಿ 10 ರಿಂದ 12ರವರೆಗೆ, ಮಧ್ಯಾಹ್ನ 12 ರಿಂದ 6ರವರೆಗೆ ವಿದ್ಯುತ್ ಪೂರೈಕೆ ಕಡಿತಗೊಳಿಸಿ ಉದ್ಯಮ-ವಾಣಿಜ್ಯಿಕ ಬಳಕೆಗೆ ಸರಿಹೊಂದಿಸಲಾಗುತ್ತಿದೆ. ಐಪಿ ಸೆಟ್​ಗಳಿಗೆ ನಿರಂತರ ಏಳು ತಾಸು ಬದಲು ಐದು ತಾಸು ಮೂರು ಫೇಸ್ ವಿದ್ಯುತ್ ಪೂರೈಸಿ ಎರಡು ತಾಸು ಕಡಿತಗೊಳಿಸಿದರೆ ಒತ್ತಡ ಗಮನಾರ್ಹ ರೀತಿಯಲ್ಲಿ ತಗ್ಗಲಿದೆ. ನವೆಂಬರ್ ನಂತರ ಕಬ್ಬು ಕಟಾವು ಶುರುವಾಗಲಿದೆ. ಇದರಿಂದಾಗಿ ಪಂಪ್​ಸೆಟ್​ಗಳಿಗೆ ವಿದ್ಯುತ್ ಬಳಕೆ ಇಳಿಮುಖವಾಗಲಿದ್ದು, ಗೃಹ ಮತ್ತು ವಾಣಿಜ್ಯಿಕ ಬಳಕೆಗೆ ಒದಗಿಸಲು ಸಮಸ್ಯೆಯಾಗದು. ವಿದ್ಯುತ್ ವಿನಿಮಯ ಆಧಾರದಲ್ಲಿ ಉತ್ತರಪ್ರದೇಶದ 300 ಮೆ.ವಾ. ಪಂಜಾಬ್ 600 ಮೆ.ವಾ. ನವೆಂಬರ್ ನಂತರ ಲಭಿಸಲಿದೆ. ವಿದ್ಯುತ್ ಕಾಯ್ದೆ ಸೆಕ್ಷನ್ 11 ಜಾರಿಯಿಂದ ಖಾಸಗಿ ಸಂಸ್ಥೆಗಳ 800 ಮೆ. ವಾ. ದೊರೆಯಲಿದೆ. ನಂತರದ ಪರಿಸ್ಥಿತಿ ನೋಡಿಕೊಂಡು ವಿದೇಶಿ ಕಲ್ಲಿದ್ದಲು ಮತ್ತು ಅಲ್ಪಾವಧಿ ವಿದ್ಯುತ್ ಖರೀದಿಗೆ ಮುಂದಾಗುವ ಸಾಧ್ಯತೆಗಳಿವೆ.

ವೆಚ್ಚ ಎಷ್ಟು?: ಚಾಲ್ತಿ ದರದ ಪ್ರಕಾರ ವಿದೇಶಿ ಕಲ್ಲಿದ್ದಲು ಟನ್​ಗೆ ಸಾಗಣೆ ವೆಚ್ಚವೂ ಸೇರಿ 20 ಸಾವಿರ ರೂ.ಗಳಿದ್ದರೆ, ಪ್ರತಿ ಯೂನಿಟ್ ದರ 12 ರೂ. ಆಸುಪಾಸಿನಲ್ಲಿದೆ. ದೇಶೀಯ ಕಲ್ಲಿದ್ದಲು ದರಕ್ಕೆ ಹೋಲಿಸಿದರೆ ವಿದೇಶಿ ಕಲ್ಲಿದ್ದಲು 10ಪಟ್ಟು ಹೆಚ್ಚಿದೆ. ಉಷ್ಣತಾಮಾಪನ, ಗಂಧಕ ಅಂಶ ಹೆಚ್ಚಳ ಅಡ್ಡಪರಿಣಾಮ ತಪ್ಪಿಸುವುದು ಅಷ್ಟೇ ಪ್ರಮುಖವಾಗಿದೆ. ದೇಶದಲ್ಲಿ ಲಭಿಸುವ ಕಲ್ಲಿದ್ದಲು ಗುಣಧರ್ಮದ ಆಧಾರದಲ್ಲಿ ಶಾಖೋತ್ಪನ್ನ ಸ್ಥಾವರಗಳ ಬಾಯ್ಲರ್ ವಿನ್ಯಾಸಗೊಳಿಸಿದ್ದು, ದೇಶದ ಕಲ್ಲಿದ್ದಲು ಜತೆಗೆ ವಿದೇಶದ ಶೇ.10ರಷ್ಟು ಕಲ್ಲಿದ್ದಲು ಮಿಶ್ರಣ ಮಾಡಲು ಮಾತ್ರ ಸಾಧ್ಯವಿದೆ. ವಿದೇಶಿ ಕಲ್ಲಿದ್ದಲು ಹೆಚ್ಚು ದಿನ ದಾಸ್ತಾನಿಟ್ಟರೆ ಅದಕ್ಕಿರುವ ಕ್ಯಾಲೋರಿಕ್ ವಾಲ್ಯೂನಿಂದ ಇಟ್ಟಲ್ಲಿಯೇ ಸುಟ್ಟು ಬೂದಿಯಾಗುತ್ತದೆ. ಹೀಗಾಗಿ 10 ಲಕ್ಷ ಟನ್ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡರೆ ಅದರ 10ಪಟ್ಟು ದೇಶೀಯ ಕಲ್ಲಿದ್ದಲು ತರಿಸಿಕೊಳ್ಳಬೇಕಾಗುತ್ತದೆ. ಅಲ್ಪಾವಧಿಗೆ 1,500 ಮೆ.ವಾ ಅಂದರೆ ಪ್ರತಿ ತಾಸಿಗೆ 15 ಲಕ್ಷ ಯೂನಿಟ್ ಖರೀದಿಸಲು ನೂರಾರು ಕೋಟಿ ರೂ. ಬೇಕಾಗಲಿದ್ದು, ಇಷ್ಟೊಂದು ದುಬಾರಿ ವ್ಯವಹಾರ ನಿಭಾಯಿಸುವುದು ಕಷ್ಟಕರವೆಂದು ಆರ್ಥಿಕ ಇಲಾಖೆ ಮೂಲಗಳು ಹೇಳುತ್ತವೆ.

ಸಮಯ ದೂಡುವ ತಂತ್ರ: ವಿದ್ಯುತ್ ಬವಣೆ ನಿಯಂತ್ರಿಸಲು ಕ್ರಮ ಕೈಗೊಂಡಿದ್ದೇವೆ. ಎಲ್ಲವೂ ಅನುಷ್ಠಾನಕ್ಕೆ ಬರಲಿದೆ ಎಂದು ಸರ್ಕಾರ ಸಾರಿದ್ದರೂ ವಾಸ್ತವಿಕ ಪರಿಸ್ಥಿತಿ ಬೇರೆಯೇ ಇದೆ. ಕಲ್ಲಿದ್ದಲು ಮತ್ತು ವಿದ್ಯುತ್ ಖರೀದಿಗೆ ಖಜಾನೆಯಲ್ಲಿ ಹಣ ಸಂಗ್ರಹವಾಗುವವರೆಗೆ ಸಮಯ ದೂಡುವ ತಂತ್ರಕ್ಕೆ ಸರ್ಕಾರ ಮೊರೆ ಹೋಗಲಿದೆ ಎಂಬ ಅನುಮಾನವೂ ಇದೆ. ಈಗಿರುವ ಪರಿಸ್ಥಿತಿಯನ್ನು ನವೆಂಬರ್ ಅಂತ್ಯದವರೆಗೆ ಕೊಂಡೊಯ್ಯುವ ಉದ್ದೇಶ ಇದೆ ಎನ್ನಲಾಗಿದೆ. ನಗರ, ಮಹಾನಗರಗಳು ಹೊರತುಪಡಿಸಿ ಉಳಿದಡೆ ಅನಧಿಕೃತ ಲೋಡ್​ಶೆಡ್ಡಿಂಗ್ ಮುಂದುವರಿಸಲಾಗುತ್ತಿದೆ.

ಕೃತಕ ಅಭಾವ ಶಂಕೆ: ರಾಜ್ಯದಲ್ಲಿ ಈ ಬಾರಿ ವಿದ್ಯುತ್ ಗರಿಷ್ಠ ಬೇಡಿಕೆ 15 ಸಾವಿರ ಮೆ.ವಾ. ದಾಟಲಿದೆ ಎಂದು ಲೋಡ್ ಡಿಸ್ಪಾಚಿಂಗ್ ಸೆಂಟರ್ ಪ್ರೊಜೆಕ್ಟ್ ಮಾಡಿತ್ತು. ಹವಾಮಾನ ಇಲಾಖೆಯು ಶೇ.30ರಷ್ಟು ಮಳೆ ಅಭಾವ ಉಂಟಾಗಲಿದೆ ಎಂದು ಅಂದಾಜಿಸಿತ್ತು. ಗೃಹಜ್ಯೋತಿ ಜಾರಿಗೆ ಮುನ್ನ 16 ಸಾವಿರ ಮೆ.ವಾ. ಬೇಡಿಕೆ ಬಂದರೂ ನಿಭಾಯಿಸುವ ಸಾಮರ್ಥ್ಯ ರಾಜ್ಯಕ್ಕಿದೆ ಎಂದು ಇಂಧನ ಇಲಾಖೆ ಹೇಳಿಕೊಂಡಿತ್ತು. ಸಂಭಾವ್ಯ ಪರಿಸ್ಥಿತಿ ಎದುರಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳದೆ ಕೈಕಟ್ಟಿ ಕುಳಿತಿದ್ದರ ಹಿಂದೆ ಕೃತಕ ಅಭಾವ ಸೃಷ್ಟಿಯ ಶಂಕೆಯಿದೆ. ಕೂಡಗಿಯ ಎನ್​ಟಿಪಿಸಿಯಿಂದ 1,200 ಮೆ.ವಾ ವಿದ್ಯುತ್ ಪ್ರತಿ ಯೂನಿಟ್​ಗೆ 5.10 ರೂ.ನಂತೆ ಖರೀದಿಸಲು ಅವಕಾಶವಿದ್ದರೂ ನಿರ್ಲಕ್ಷಿಸಿರುವುದು ಅನುಮಾನಕ್ಕೆ ಮತ್ತೊಂದು ಕಾರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net