ಸತೀಶ್ ಜಾರಕಿಹೊಳಿ ಆಡಿರುವ ಮಾತುಗಳು ಕಾಂಗ್ರೆಸ್​ನ ಕೋಮು ಸಂಸ್ಕೃತಿಗೆ ಸಾಕ್ಷಿ; ಸರಣಿ ಟ್ವೀಟ್ ಮೂಲಕ ಟೀಕಿಸಿದ ಬಿಜೆಪಿ

BJP Tweet
Published on

ಬೆಂಗಳೂರು: ಹಿಂದೂ ಶಬ್ದದ ಅರ್ಥ ಅಸಹ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಡಿದ ಮಾತು ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಬಿಜೆಪಿ ನಾಯಕರು ಸತೀಶ್ ಜಾರಕಿಹೊಳಿ ಆಡಿರುವ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ರಾಜ್ಯ ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಎಂಬ ಹ್ಯಾಷ್​​ಟ್ಯಾಗ್​ನೊಂದಿಗೆ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ಟೀಕಿಸಿದೆ.

ಸತೀಶ್‌ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್‌ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಆದರೆ ಕಾರ್ಯಾಧ್ಯಕರು ಮಾತ್ರ ತಮ್ಮ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ರಾಜಾರೋಷವಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಧಮ್ ಇದ್ದರೆ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ರಾಜೀನಾಮೆ ಪಡೆಯಿರಿ ಎಂದು ಬಿಜೆಪಿ ಹೇಳಿದೆ.

ಸರಣಿ ಟ್ವೀಟ್ ಮಾಡುತ್ತಾ ಬಿಜೆಪಿ, ಬಹುಸಂಖ್ಯಾತ ಹಿಂದೂಗಳು ಆರಾಧಿಸುವ ಶ್ರೀರಾಮನ ಅಸ್ತಿತ್ವವನ್ನೇ ಕಾಂಗ್ರೆಸ್‌ ಪ್ರಶ್ನಿಸುತ್ತಾ ಬಂದಿದೆ. ಈಗ ಹಿಂದೂ ಎನ್ನುವ ಪದವನ್ನೇ ಕಾಂಗ್ರೆಸ್‌ ನಾಯಕರು ಅಶ್ಲೀಲ ಎನ್ನುತ್ತಿದ್ದಾರೆ. ಇಂತಹ ಮನಸ್ಥಿತಿ ಕಾಂಗ್ರೆಸ್​ಗೆ ಯಾಕಿದೆ ಎಂದು ಪ್ರಶ್ನಿಸಿದೆ.

ರಾಹುಲ್ ಗಾಂಧಿ ನನಗೆ ಹಿಂದುತ್ವದಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ. ಕುಂಕುಮ, ಕೇಸರಿ ಕಂಡರೆ ನನಗೆ ಭಯವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹಿಂದೂ ಪದದ ಅರ್ಥವೇ ಅಶ್ಲೀಲ ಎಂದಿರುವುದು ಕಾಂಗ್ರೆಸ್ ಹಿಂದೂಗಳ ವಿರುದ್ಧ ನಡೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿ.

ಹಿಂದೂಗಳ ಭಾವನೆಗೆ ಘಾಸಿಯುಂಟು ಮಾಡಿ, ಕ್ಷಮೆ ಕೇಳುವುದಿಲ್ಲ ಎಂಬ ಧಿಮಾಕು ತೋರಿಸಿರುವ ಸತೀಶ್ ಜಾರಕಿಹೊಳಿಯ ನಡೆ, ಕಾಂಗ್ರೆಸ್‌ ಯಾವತ್ತೂ ಹಿಂದೂಗಳ ಪರ ಇರಲಿಲ್ಲ, ಮುಂದೆಯೂ ಇರುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.

ಹಿಂದುತ್ವ ಎಂದರೆ ಜೀವನಶೈಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎನ್ನುವ ಮೂಲಕ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕೋಮು ಸಂಸ್ಕೃತಿಯಲ್ಲದೆ ಮತ್ತೇನು ಎಂದು ರಾಜ್ಯ ಬಿಜೆಪಿ ಸರಣಿ ಟ್ವೀಟ್​ ಮಾಡುವ ಮೂಲಕ ಪ್ರಶ್ನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net