ಇನ್ಮುಂದೆ ನಗುವುದಕ್ಕೆ ಜನರೇ ಇರುವುದಿಲ್ಲ ... ಇದು ಕಪಿಲ್​ ಶರ್ಮ ಶೋ ಸ್ಪೆಷಾಲಿಟಿ

Kapil Sharma Show - Final
Published on

ಲಾಕ್​ಡೌನ್​ ನಂತರ ಕೆಲವು ರಾಜ್ಯಗಳಲ್ಲಿ ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್​ಗೇನೋ ಅನುಮತಿ ನೀಡಲಾಗಿದೆ. ಆದರೆ, ಇದುವರೆಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿಲ್ಲ. ಹಾಗಾಗಿ ರಿಯಾಲಿಟಿ ಶೋ ಮಾಡುತ್ತಿದ್ದವರೆಲ್ಲಾ ಮನೆಯಲ್ಲಿ ಖಾಲಿ ಕೂರುವಂತಾಗಿದೆ.

ಆದರೆ, ಕಪಿಲ್​ ಶರ್ಮ ಮಾತ್ರ ಆದಷ್ಟು ಬೇಗ ವಾಪಸ್ಸು ಬರುವುದಕ್ಕೆ ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ, ಅವಕಾಶ ಸಿಕ್ಕರೆ ತಮ್ಮ 'ಕಪಿಲ್​ ಶರ್ಮ ಶೋ' ಚಿತ್ರೀಕರಣವನ್ನು ಜುಲೈ ಮಧ್ಯಭಾಗದಿಂದ ಪ್ರಾರಂಭಿಸುವುದಕ್ಕೆ ಸಜ್ಜಾಗಿದ್ದಾರೆ.

ಈಗಾಗಲೇ ಕಪಿಲ್​ ಶರ್ಮ ತಮ್ಮ ತಂಡದವರಿಗೆ ಚಿತ್ರೀಕರಣಕ್ಕೆ ರೆಡಿಯಾಗುವಂತೆ ಸೂಚನೆ ನೀಡಿದ್ದು, ಕಲಾವಿದರೆಲ್ಲಾ ಈಗಾಗಲೇ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಕಪಿಲ್​, ಕೃಷ್ಣ ಅಭಿಷೇಕ್​, ಭಾರತೀ ಸಿಂಗ್​, ಚಂದನ್​ ಪ್ರಭಾಕರ್​, ಕಿಕು ಶಾರದಾ ಮುಂತಾದವರು ವಿಡಿಯೋ ಕಾನ್ಪರೆನ್ಸಿಂಗ್​ ಮೂಲಕ ರಿಹರ್ಸಲ್​ ಸಹ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಎಂದಿನಂತೆ ನಗುವುದಕ್ಕೆ ಮತ್ತು ನಗಿಸುವುದಕ್ಕೆ ಅರ್ಚನಾ ಪೂರಣ್​ ಸಿಂಗ್​, ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಅದಲ್ಲದೆ ಪ್ರತಿ ಕಂತಿನಲ್ಲೂ ಒಂದೊಂದು ಚಿತ್ರತಂಡ ಅಥವಾ ಸೆಲೆಬ್ರಿಟಿ ವಿಶೇಷ ಅತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮುಂದಿನ ದಿನಗಳಲ್ಲಿ ಯಾರನ್ನೆಲ್ಲಾ ಕರೆಸಬಹುದು ಎಂಬ ಲೆಕ್ಕಾಚಾರಗಳೂ ಶುರುವಾಗಿದೆಯಂತೆ.

ಮೂಲಗಳ ಪ್ರಕಾರ, ಕಾರ್ಯಕ್ರಮ ಶುರುವಾದರೆ, ಮೊದಲ ಅತಿಥಿಯಾಗಿ ಸೋನು ಸೂದ್​ ಬರಲಿದ್ದಾರೆ. ಸೋನು ಇತ್ತೀಚೆಗಷ್ಟೇ, ಮುಂಬೈನಲ್ಲಿ ಉಳಿದಿದ್ದ ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರಿಗೆ ಕಳಿಸಿ, ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಸೋನುರಂಥವರು ಇದ್ದರೆ, ಚೆನ್ನ ಎಂಬ ಕಾರಣಕ್ಕೆ ಅವರನ್ನು ಮೊದಲ ಕಂತಿನ ಅತಿಥಿಯಾಗಿ ಕರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಕಾರ್ಯಕ್ರಮದಲ್ಲಿ ಒಂದು ದೊಡ್ಡ ಬದಲಾವಣೆಯಾಗಲಿದ್ದು, ಪ್ರತಿ ಬಾರಿಯಂತೆ ಕಾರ್ಯಕ್ರಮ ವೀಕ್ಷಿಸಲು ಸೆಟ್​ನಲ್ಲಿ ಜನ ಇರುವುದಿಲ್ಲವಂತೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ, ಜನರನ್ನು ದೂರವಿಟ್ಟು, ಪರ್ಯಾಯ ವ್ಯವಸ್ಥೆಯೊಂದನ್ನು ಮಾಡುವುದಕ್ಕೆ ಕಾರ್ಯಕ್ರಮದ ಆಯೋಜಕರು ಯೋಚಿಸುತ್ತಿದ್ದು, ಶೀಘ್ರದಲ್ಲೇ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net