

ಸುಶಾಂತ್ ಸಾವಿನ ನಂತರ ರವೀನಾ ಟಂಡನ್, ಚಿತ್ರರಂಗದಲ್ಲಿ ಸ್ಟ್ರಗಲ್ ಮಾಡುವುದು ಎಷ್ಟು ಕಷ್ಟ ಎಂಬ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಹೀರೋಗಳು, ಅವರ ಗರ್ಲ್ಫ್ರೆಂಡ್ಗಳು, ಮಾಧ್ಯಮದವರು ... ಹೇಗೆಲ್ಲಾ ಒಬ್ಬ ಕಲಾವಿದನನ್ನು ತುಳಿಯುತ್ತಾರೆ ಎಂಬುದನ್ನು ಬರೆದುಕೊಂಡಿದ್ದರು.
ಈಗ ಈ ವಿಷಯವಾಗಿ ಅವರು ಇನ್ನಷ್ಟು ಮಾತನಾಡಿದ್ದಾರೆ. ಮಾತನಾಡಿದ್ದಾರೆ ಎನ್ನುವುದಕ್ಕಿಂತ ಅವರು ತಮ್ಮ ಅನಿಸಿಕೆಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಮುಕ್ತವಾಗಿ ಹಂಚಿಕೊಂಡಿದ್ದಾರೆ.
'ಸುಶಾಂತ್ ಸಿಂಗ್ ಸಾವಿನ ಮೂರು ವಾರಗಳ ನಂತರವು, ಚರ್ಚೆ ನಡೆಯುತ್ತಲೇ ಇದೆ. ಇದನ್ನು ದೊಡ್ಡ ವಿಷಯ ಮಾಡಬೇಡಿ. ಇಲ್ಲಿ ಯಾರನ್ನೂ ದೂಷಿಸುವುದಕ್ಕೆ ಸಾಧ್ಯವಿಲ್ಲ. ಚಿತ್ರರಂಗ ಇರುವುದೇ ಹೀಗೆ. ಇತ್ತೀಚೆಗೆ, ಒಂದು ವಾಟ್ಸಪ್ ಮೆಸೇಜ್ನಲ್ಲಿ ಕರಣ್ ಜೋಹಾರ್ ಬೇಕಂತಲೆ ಸುಶಾಂತ್ ಸಿಂಗ್ ಜತೆಗೆ ಒಂದು ಕೆಟ್ಟ ಸಿನಿಮಾ ಮಾಡಿ ಅವರನ್ನು ಹಾಳು ಮಾಡಿದರು ಎಂದು ಆರೋಪಿಸಲಾಗಿದೆ. ಒಬ್ಬ ನಿರ್ಮಾಪಕ ಯಾಕೆ ಕೋಟ್ಯಂತರ ರೂಪಾಯಿ ಮತ್ತು ಅಮೂಲ್ಯ ಸಮಯವನ್ನು ಖರ್ಚು ಮಾಡಿ, ಒಂದು ಕೆಟ್ಟ ಸಿನಿಮಾ ಮಾಡುತ್ತಾನೆ? ಹಾಗೆಲ್ಲಾ ಯಾರೂ ಮಾಡುವುದಿಲ್ಲ. ಈ ತರಹದ ಆರೋಪಗಳು ಆಧಾರರಹಿತ' ಎಂದು ಅವರು ಹೇಳಿಕೊಂಡಿದ್ದಾರೆ.
ಹಾಗಂತ ಇಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ರವೀನಾ, 'ಇಲ್ಲಿ ತುಂಬಾ ರಾಜಕೀಯವಿದೆ. ಒಳ್ಳೆಯ ಜನರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಆ ಕೆಟ್ಟವರು ನಿಮ್ಮ ಸೋಲನ್ನು ಪ್ಲಾನ್ ಮಾಡುತ್ತಾರೆ. ಇದು ನನ್ನ ಸ್ವಂತ ಅನುಭವ. ನೀವು ಸೋಲುವುದನ್ನು ಅವರು ಇಷ್ಟಪಡುತ್ತಾರೆ. ಹಾಗಂತ ಇದು ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ರಂಗಗಳಲ್ಲೂ ಇದೆ. ಆದರೆ, ಇಲ್ಲಿ ಗ್ಲಾಮರ್, ಹಣ ಎಲ್ಲವೂ ಹೆಚ್ಚಾಗಿರುವುದರಿಂದ ಹೈಲೈಟ್ ಆಗುತ್ತದೆ' ಎಂದು ಅಭಿಪ್ರಾಯಪಡುತ್ತಾರೆ.
ಈ ವಿಷಯವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, 'ಬಹಳ ಹಿಂದೆ ನಾನು ಒಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೆ. ಒಂದು ಸಂಜೆ ಚಿತ್ರದ ಮುಹೂರ್ತ ನಿಗದಿಯಾಗಿತ್ತು. ನಾನು ಚಿತ್ರದ ಲಾಂಚ್ಗೆ ತಯಾರಾಗುತ್ತಿರುವಾಗಲೇ, ಚಿತ್ರತಂಡದಿಂದ ನನಗೊಂದು ಫೋನ್ ಬಂತು. ನನ್ನನ್ನು ಚಿತ್ರದಿಂದ ತೆಗೆದು ಹೊರಹಾಕಲಾಗಿದೆಯೆಂದೂ, ಆದಷ್ಟು ಬೇಗ ಅಡ್ವಾನ್ಸ್ ವಾಪಸ್ಸು ಕೊಡಬೇಕೆಂದು ಹೇಳಲಾಯಿತು. ನಾನು ನಿಜಕ್ಕೂ ಶಾಕ್ ಆಗಿದ್ದೆ. ಇದ್ದಕ್ಕಿದ್ದಂತೆ ನನ್ನನ್ನು ಯಾಕೆ ಕಿತ್ತು ಹಾಕಿದರು ಎಂದು ಸ್ವಲ್ಪ ಹುಡುಕಾಡಿದಾಗ, ನಾಯಕನ ಗರ್ಲ್ಫ್ರೆಂಡ್ಗೆ ನಾನು ಇಷ್ಟವಾಗಲಿಲ್ಲ ಎಂದು ಗೊತ್ತಾಯಿತು' ಎಂದು ರವೀನಾ ಹೇಳಿದ್ದಾರೆ.
ಈ ತರಹದ ಸಮಸ್ಯೆಗಳು ಚಿತ್ರರಂಗದಲ್ಲಿ ಎಲ್ಲರಿಗೂ ಆಗುತ್ತದೆ ಎಂದು ಹೇಳಿಕೊಂಡಿರುವ ಅವರು, 'ಇಂಥ ಸಮಸ್ಯೆಗಳು ರಾಜ್ ಕಪೂರ್ ಕುಟುಂಬವನ್ನೂ ಬಿಟ್ಟಿಲ್ಲ. ಇಲ್ಲವಾಗಿದ್ದರೆ, ಎಷ್ಟೋ ಸ್ಟಾರ್ ಮಕ್ಕಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ಗಳಾಗಿ ಮೆರೆಯುತ್ತಿದ್ದರು' ಎಂಬುದು ರವೀನಾ ಅಭಿಪ್ರಾಯ.