

ತಮ್ಮ ಪ್ರತೀ ಚಿತ್ರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವವರು ನಟ ಸೂರ್ಯ. ಇದೀಗ ಅವರು ತಮ್ಮ ಹೊಸ ಚಿತ್ರದಲ್ಲಿ ಡಬ್ಬಲ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಸೂರ್ಯಗೆ ಹೊಸದೇನಲ್ಲ. ಈಗಾಗಲೇ ಅವರು ಏಳು ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇತ್ತೀಚಿನ ವರ್ಷಗಳಲ್ಲಿ ಮತ್ತು ತಮ್ಮ ಸಮಕಾಲೀನರಲ್ಲಿ ಅತೀ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವವರೆಂದರೆ ಅದು ಸೂರ್ಯ ಮಾತ್ರ ಎಂದು ಕಾಲಿವುಡ್ನಲ್ಲಿ ಹೇಳಲಾಗುತ್ತದೆ.
ಎರಡು ವರ್ಷಗಳ ಹಿಂದೆ ಬಿಡುಗಡೆಯಾದ, ತಮ್ಮದೇ ನಿರ್ಮಾಣದ '24' ಎಂಬ ಚಿತ್ರದಲ್ಲಿ ಸೂರ್ಯ ಅಪ್ಪ-ಮಗನಾಗಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಗೌತಮ್ ಮೆನನ್ ನಿರ್ದೇಶನದ 'ವಾರನಂ ಆಯಿರಂ' ಚಿತ್ರದಲ್ಲಿ ಸೂರ್ಯ ತಂದೆ-ಮಗನಾಗಿದ್ದರು. ಈಗ 'ವಾಡಿವಾಸಲ್' ಎಂಬ ಹೊಸ ಚಿತ್ರದಲ್ಲೂ ಸೂರ್ಯ ಅಪ್ಪ-ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
'ವಾಡಿವಾಸಲ್' ಚಿತ್ರವನ್ನು ನಿರ್ದೇಶಿಸುತ್ತಿರುವುದು ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್. ಕಳೆದ ವರ್ಷ ಬಿಡುಗಡೆಯಾದ 'ಅಸುರನ್' ಮೂಲಕ ಇನ್ನಷ್ಟು ಜನಪ್ರಿಯತೆ ಮತ್ತು ಯಶಸ್ಸು ತಮ್ಮದಾಗಿಸಿಕೊಂಡ ವೆಟ್ರಿಮಾರನ್, ಸೂರ್ಯ ಜತೆಗೆ ಕೆಲಸ ಮಾಡುವುದಾಗಿ ಕಳೆದ ವರ್ಷವೇ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಬಿದ್ದಿರಲಿಲ್ಲ.
ಇದನ್ನೂ ಓದಿ: 30 ಕೆಜಿ ತೂಕ ಇಳಿಸಿಕೊಂಡರೂ ಜನ ಗೇಲಿ ಮಾಡೋದು ಬಿಡಲಿಲ್ಲ!
ಈಗ ಈ ಸುದ್ದಿ ನಿಜವಾಗಿದ್ದು, 'ವಾಡಿವಾಸಲ್' ಚಿತ್ರದಲ್ಲಿ ಸೂರ್ಯ ಅವರನ್ನು ನಿರ್ದೇಶಿಸುತ್ತಿದ್ದಾರೆ ವೆಟ್ರಿಮಾರನ್. ಜಲ್ಲಿಕಟ್ಟು ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ಸೂರ್ಯ, ಅಪ್ಪ-ಮಗನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಪ್ಪ, ಒಂದು ಗೂಳಿಯನ್ನು ಪಳಗಿಸುವುದಕ್ಕೆ ಹೋಗಿ, ಪ್ರಾಣ ಕಳೆದುಕೊಳ್ಳುತ್ತಾನಂತೆ. ಆ ನಂತರ ಮಗ ಏನು ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ.
ಈ ಚಿತ್ರಕ್ಕೆ ಮೊದಲಿಗೆ ಅಪ್ಪನ ಪಾತ್ರಕ್ಕೆ ಸತ್ಯರಾಜ್ ಮತ್ತು ರಾಜಕಿರಣ್ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ, ಕಾರಣಾಂತರಗಳಿಂದ, ಅವರಿಬ್ಬರೂ ಚಿತ್ರದಲ್ಲಿ ನಟಿಸುತ್ತಿಲ್ಲ. ತಂದೆ ಪಾತ್ರವನ್ನು ಯಾರಿಂದ ಮಾಡಿಸುವುದು ಎಂದು ಚಿತ್ರತಂಡದವರು ತಲೆ ಕೆಡಿಸಿಕೊಂಡು ಕೂತಿದ್ದಾಗ, ಆ ಪಾತ್ರವನ್ನು ಸೂರ್ಯ ಅವರೇ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ‘
ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ.