

ಸದಾ ಕ್ರಿಯಾಶೀಲ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಏನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಹೀಗಾಗಿ ಸದಾ ಹೊಸತನ್ನ ಹುಡುಕಿಕೊಂಡು ಹೋಗುವುದು ಅವರಿಗೆ ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಕರೊನಾ ಆಕ್ರಮಿಸಿ ಎಲ್ಲರನ್ನು ಇದ್ದಲ್ಲೇ ಕಟ್ಟಿ ಹಾಕಿದ್ದರೂ ಸುದೀಪ್ ಅವರು ಮಾತ್ರ ಸುಮ್ಮನೆ ಕುಳಿತಿಲ್ಲ. ಕಳೆದ ಒಂದು ತಿಂಗಳಿನಿಂದಲೂ ಪ್ರತಿ ವಾರಾಂತ್ಯ ವಿಶ್ವದ ನಾನಾ ಭಾಗದಲ್ಲಿರುವ ಕನ್ನಡಿಗರ ಜತೆಗೆ ನೇರ ಮಾತುಕತೆ ನಡೆಸುತ್ತಲೇ ಇದ್ದಾರೆ. ಅಭಿಮಾನಿಗಳು ಕೇಳುವ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಅವರನ್ನ ಖುಷಿಪಡಿಸುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿಯೇ ಈಗ ಮತ್ತೊಂದು ವಿಶೇಷ ಲೈವ್ ಕಾರ್ಯಕ್ರಮಕ್ಕೆ ಸುದೀಪ್ ಇದೇ ವಾರಾಂತ್ಯಕ್ಕೆ ಸಜ್ಜಾಗುತ್ತಿದ್ದಾರೆ.
ಹೌದು. ಇದು ಕರ್ನಾಟಕದಲ್ಲಿನ ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿಗಳಿಗೆಂದೆ ರೂಪಿತವಾಗಿರುವ ಕಾರ್ಯಕ್ರಮವಾಗಿದ್ದು, ಜುಲೈ 11, ಶನಿವಾರ ಮತ್ತು ಜುಲೈ 12, ಭಾನುವಾರ ರಾತ್ರಿ 8 ರಿಂದ 10 ಗಂಟೆಯವರೆಗೆ ಸುದೀಪ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ತಮ್ಮ ಅಭಿಮಾನಿಗಳನ್ನ ಭೇಟಿಯಾಗಿ ಅವರನ್ನ ಖುಷಿಪಡಿಸಲಿದ್ದಾರೆ.
ಇದೊಂದು ವಿಶಿಷ್ಟ ಪ್ರಯತ್ನವಾಗಿದ್ದು, ಇಲ್ಲಿ ಅಭಿಮಾನಿಗಳು ಸುದೀಪ್ ಅವರ ಮುಂದೆ ತಮ್ಮ ಪ್ರತಿಭೆಯನ್ನ ಪ್ರದರ್ಶಿಸುವ ಅಪರೂಪದ ಅವಕಾಶ ದೊರೆಯಲಿದೆ. ನಾಡಿನ ಲಕ್ಷಾಂತರ ಜನರ ಹೃದಯ ಗೆದ್ದಿರುವ ಸುದೀಪ್ ನೇರವಾಗಿ ಭೇಟಿಯಾಗಲಿದ್ದಾರೆ ಎಂಬ ಸಂಗತಿ ಕೇಳಿಯೇ ಅದೆಷ್ಟೋ ಅಭಿಮಾನಿಗಳು ಅದಾಗಲೇ ಕುತೂಹಲದಿಂದ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದಾರೆ.
ಸುದೀಪ್ ಅವರ ಜತೆ ಮಾತನಾಡಲು ಇಚ್ಛಿಸುವವರು, ಅವರ ಕುರಿತು ಹತ್ತು ಹಲವು ಪ್ರಶ್ನೆಗಳನ್ನ ಕೇಳಬೇಕೆಂದು ಕಾತರದಿಂದ ಕಾಯುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳುವ ಮೂಲಕ ಈ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.