ಕಲೆಕ್ಷನ್​ ವಿಷಯದಲ್ಲಿ ಟಾಮ್​ ಕ್ರೂಸ್​ ಚಿತ್ರವನ್ನೂ ಹಿಂದಿಕ್ಕಿದ 'ಕಾಂತಾರ'

Kantara - Top Gun
Published on

ಮುಂಬೈ: 'ಕಾಂತಾರ' ಚಿತ್ರವು ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಈಗಾಗಲೇ ಒಂದಿಷ್ಟು ದಾಖಲೆ ಮತ್ತು ಹೆಗ್ಗಳಿಕೆಗಳಿಗೆ ಪಾತ್ರವಾಗಿರುವ ಚಿತ್ರವು, ಈಗ ಇನ್ನೊಂದು ಹೊಸ ದಾಖಲೆ ಮಾಡಿದೆ. ಟಾಮ್​ ಕ್ರೂಸ್​ ಅಭಿನಯದ ಹಾಲಿವುಡ್​ ಚಿತ್ರವನ್ನೂ ಕಲೆಕ್ಷನ್​ನಲ್ಲಿ ಹಿಂದಿಕ್ಕಿದೆ.

ಟಾಮ್​ ಕ್ರೂಸ್​ ಅಭಿನಯದ 'ಟಾಪ್​ ಗನ್​: ಮ್ಯಾವರಿಕ್​' ಚಿತ್ರವು ಕೆಲವು ವಾರಗಳ ಹಿಂದೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಸಾಕಷ್ಟು ನಿರೀಕ್ಷೆಗಳೊಂದಿಗೆ ಚಿತ್ರ ಬಿಡುಗಡೆಯಾದರೂ, ಒಟ್ಟಾರೆ ಇಡೀ ದೇಶದಲ್ಲಿ ಚಿತ್ರ ಗಳಿಸಿದ ಮೊತ್ತ ಬರೀ 35 ಕೋಟಿ ಮಾತ್ರ. 'ಕಾಂತಾರ' ಚಿತ್ರದ ಹಿಂದಿ ಅವತರಣಿಕೆಯೊಂದೇ ಉತ್ತರ ಭಾರತದಲ್ಲಿ 36.95 ಕೋಟಿ ರೂ.ಗಳನ್ನು ದುಡಿದು, ಆ ಚಿತ್ರವನ್ನು ಹಿಂದಿಕ್ಕಿದೆ. ಇಲ್ಲಿಂದ ಮುಂದೆ ಇನ್ನಷ್ಟು ಚಿತ್ರಗಳು ಇದ್ದು, ಆ ಚಿತ್ರಗಳ ದಾಖಲೆಗಳನ್ನು ಸಹ 'ಕಾಂತಾರ' ಮುರಿಯುತ್ತದಾ ಎಂಬ ಕುತೂಹಲ ಎಲ್ಲರಿಗೂ ಇದೆ.

'ಕಾಂತಾರ' ಚಿತ್ರದ ಕಲೆಕ್ಷನ್​ ಮೂರನೆಯ ವಾರದಲ್ಲೂ ಅತ್ಯುತ್ತಮವಾಗಿದ್ದು, ಶನಿವಾರ (ಅ.29) ಮೂರು ಕೋಟಿ ಗಳಿಕೆಯಾಗಿದೆ. ಒಂದು ಕಡೆ ಬಿಡುಗಡೆಯಾದ ಹೊಸ ಹಿಂದಿ ಚಿತ್ರಗಳೇ ಮಕಾಡೆ ಮಲಗುತ್ತಿದ್ದರೆ, ಇನ್ನೊಂದು ಕಡೆ ಕನ್ನಡದಿಂದ ಹಿಂದಿಗೆ ಡಬ್​ ಆಗುತ್ತಿರುವ ಚಿತ್ರವೊಂದು ಈ ತರಹದ ಕಲೆಕ್ಷನ್​ ಮಾಡುತ್ತಿರುವುದು ವಿಶೇಷ. ಕಳೆದ ವಾರ ಬಿಡುಗಡೆಯಾದ 'ರಾಮ್​ ಸೇತು' ಮತ್ತು 'ಥ್ಯಾಂಕ್​ ಗಾಡ್​' ಚಿತ್ರಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರಿಂದ 'ಕಾಂತಾರ'ಕ್ಕೆ ಉತ್ತರ ಭಾರತದಲ್ಲಿ ಚಿತ್ರಕ್ಕೆ ಶೇ. 25ರಷ್ಟು ಪ್ರದರ್ಶನಗಳು ಹೆಚ್ಚಾಗಿವೆ.

'ಕಾಂತಾರ' ಚಿತ್ರದಲ್ಲಿ ರಿಷಭ್​ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದಾರೆ. ಹೊಂಬಾಳೆ ಫಿಲಂಸ್​ನಡಿ ಈ ಚಿತ್ರವನ್ನು ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net