

ಮುಂಬೈ: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರದ ಹಿಂದಿ ಅವತರಣಿಕೆಯ ನಾಗಾಲೋಟ ಇನ್ನಷ್ಟು ಮುಂದುವರೆದಿದೆ. 'ರಾಮ್ ಸೇತು' ಮತ್ತು 'ಥ್ಯಾಂಕ್ ಗಾಡ್' ಚಿತ್ರಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರಿಂದ 'ಕಾಂತಾರ'ಕ್ಕೆ ದೊಡ್ಡ ಉಪಕಾರವಾಗಿದೆ. ಉತ್ತರ ಭಾರತದಲ್ಲಿ ಚಿತ್ರಕ್ಕೆ ಶೇ. 25ರಷ್ಟು ಪ್ರದರ್ಶನಗಳು ಹೆಚ್ಚಾಗಿವೆ.
'ಕಾಂತಾರ' ಚಿತ್ರವು ಹಿಂದಿಗೆ ಡಬ್ ಆಗಿ ಎರಡು ವಾರಗಳ ಪ್ರದರ್ಶನ ಕಂಡಿದೆ. ಚಿತ್ರಕ್ಕೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುತ್ತಿರುವಾಗಲೇ ದೀಪಾವಳಿ ಬಂತು. ದೀಪಾವಳಿಯ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ರಾಮ್ ಸೇತು' ಮತ್ತು ಅಜಯ್ ದೇವಗನ್ ಅಭಿನಯದ 'ಥ್ಯಾಂಕ್ ಗಾಡ್' ಚಿತ್ರಗಳು ಬಿಡುಗಡೆಯಾದವು. ಇದರಿಂದ 'ಕಾಂತಾರ' ಚಿತ್ರದ ಕಲೆಕ್ಷನ್ಗೆ ಏಟು ಬೀಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಉಲ್ಟಾ ಆಗಿದೆ. ಆ ಎರಡು ಚಿತ್ರಗಳು ಸುಮಾರು ಎಂಬ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ 'ಕಾಂತಾರ'ಕ್ಕೆ ಬೇಡಿಕೆ ಹೆಚ್ಚಿದೆ.
'ರಾಮ್ ಸೇತು' ಮತ್ತು 'ಥ್ಯಾಂಕ್ ಗಾಡ್' ಚಿತ್ರಗಳಿಗೆ ಈಗಾಗಲೇ ಪ್ರೇಕ್ಷಕರ ಅಭಾವ ಕಾಡುತ್ತಿದೆ. ನಾಳೆ ಸೋಮವಾರದಿಂದ ಅದು ಇನ್ನಷ್ಟು ಹೆಚ್ಚಾಗಬಹುದು ಮತ್ತು ಚಿತ್ರಮಂದಿರಗಳು ಖಾಲಿ ಹೊಡೆಯಬಹುದು ಎಂಬ ಭಯ ಚಿತ್ರಮಂದಿರದವರನ್ನು ಕಾಡುತ್ತಿದೆ. ಹಾಗಾಗಿ, ಬಹಳ ಚಿತ್ರಮಂದಿರದವರು ಆ ಎರಡು ಚಿತ್ರಗಳನ್ನು ಬದಲಾಯಿಸಿ, ಬೇಡಿಕೆ ಇರುವ 'ಕಾಂತಾರ' ಚಿತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ಕಾಲಕ್ಕೆ ಅಕ್ಷಯ್ ಕುಮಾರ್ ಚಿತ್ರಗಳೆಂದರೆ ಅದು 100 ಕೋಟಿ ಕ್ಲಬ್ ಚಿತ್ರಗಳು ಎಂಬ ಮಾತಿತ್ತು. ಆದರೆ, 'ರಾಮ್ ಸೇತು' ಒಂದು ವಾರದಲ್ಲಿ 57 ಕೋಟಿ ರೂ. ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು, 'ಥ್ಯಾಂಕ್ ಗಾಡ್' ಚಿತ್ರವು 27 ಕೋಟಿಯಷ್ಟೇ ಗಳಿಸಬಹುದು ಎನ್ನಲಾಗಿದೆ. ಆದರೆ, 'ಕಾಂತಾರ'ದ ಮೂರನೆಯ ವಾರದಲ್ಲೂ ಕಲೆಕ್ಷನ್ ಕಡಿಮೆಯಾಗಿಲ್ಲ. ಇನ್ನೂ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಿದ್ದು, ಬಹಳಷ್ಟು ಚಿತ್ರಮಂದಿರದವರು 'ಕಾಂತಾರ' ಚಿತ್ರವನ್ನು ಪ್ರದರ್ಶಿಸುವುದಕ್ಕೆ ಮುಂದಾಗಿದ್ದಾರೆ. ಇಲ್ಲಿ 'ಕಾಂತಾರ' ಗೆಲ್ಲುವುದಕ್ಕೆ ಇನ್ನೊಂದು ಕಾರಣವೂ ಇದೆ. ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯದ ಜತೆಗೆ ಚಿತ್ರದ ಪ್ರವೇಶ ದರ ಕಡಿಮೆ ಇರುವುದರಿಂದ ಜನ ಮುಗಿಬಿದ್ದು 'ಕಾಂತಾರ' ಚಿತ್ರವನ್ನು ನೋಡುತ್ತಿದ್ದಾರೆ.
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.